ADVERTISEMENT

ಪಶ್ಚಿಮ ಬಂಗಾಳದ ಜನ ಹೇಳಿದರೆ ರಾಜೀನಾಮೆ ನೀಡಲು ಸಿದ್ಧ: ಅಮಿತ್ ಶಾ

ಪಿಟಿಐ
Published 11 ಏಪ್ರಿಲ್ 2021, 16:47 IST
Last Updated 11 ಏಪ್ರಿಲ್ 2021, 16:47 IST
ಅಮಿತ್ ಶಾ (ಪಿಟಿಐ)
ಅಮಿತ್ ಶಾ (ಪಿಟಿಐ)   

ಬಸೀರ್‌ಹಾಟ್: ಪಶ್ಚಿಮ ಬಂಗಾಳದ ಜನ ಹೇಳಿದರೆ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಬಸೀರ್‌ಹಾಟ್‌ನಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಸೋಲನುಭವಿಸಲಿದೆ. ಮೇ 2ರಂದು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟ ವಿಚಾರದಲ್ಲಿ ಮಮತಾ ಅವರು ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ್ದರು.

ADVERTISEMENT

‘ದೀದಿ (ಮಮತಾ) ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ತಲೆಬಾಗಿಸಿ ಆ ಕೆಲಸ ಮಾಡಬಲ್ಲೆ. ಆದರೆ, ಮಮತಾ ಅವರು ಮೇ 2ರಂದು ಸ್ಥಾನ ತ್ಯಜಿಸಬೇಕಾಗಲಿದೆ’ ಎಂದು ಶಾ ಹೇಳಿದ್ದಾರೆ.

ನಾಲ್ಕನೇ ಹಂತದ ಮತದಾನದ ವೇಳೆ ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಜನರು ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿಯ ಬಂದೂಕು ಕಸಿದುಕೊಳ್ಳಲು ಯತ್ನಿಸಿದ್ದರು. ಆ ಸಂದರ್ಭ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.