
ಇ.ಡಿ
ನವದೆಹಲಿ: ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಕುಟಂಬದ ಆಪ್ತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ಇಂದು (ಬುಧವಾರ) ತಿಳಿಸಿದ್ದಾರೆ.
ಗುರುಗ್ರಾಮದಲ್ಲಿ ಮನೆ ಖರೀದಿದಾರರಿಗೆ ವಂಚನೆ ಮಾಡಿದ ಆರೋಪದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರ ಕುಟುಂಬದ ಆಪ್ತ, ರಿಯಲ್ ಎಸ್ಟೇಟ್ ಉದ್ಯಮಿ ಅಮಿತ್ ಕತ್ಯಾಲ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಯನ್ನು ಗುರುಗ್ರಾಮದ ವಿಶೇಷ ನ್ಯಾಯಾಲಯವು ಆರು ದಿನ ಇ.ಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಗುರುಗ್ರಾಮದ ಸೆಕ್ಟರ್ 70ರಲ್ಲಿ 14 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಕ್ರಿಶ್ ಫ್ಲಾರೆನ್ಸ್ ಎಸ್ಟೇಟ್‌ನಲ್ಲಿ ಫ್ಲಾಟ್‌ಗಳನ್ನು ವಿತರಿಸದ ಆರೋಪ ಸಂಬಂಧ ತನಿಖೆ ನಡೆಯುತ್ತಿದೆ. ಇದನ್ನು ಕತ್ಯಾಲ್ ಅವರ ಆ್ಯಂಗಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ನಿರ್ಮಿಸಿತ್ತು.
2023ರಲ್ಲಿ ಲಾಲೂ ಪ್ರಸಾದ್ ಅವರ ಪತ್ನಿ ರಾಬ್ಡಿ ದೇವಿ ಮತ್ತು ಇತರೆ ಕುಟುಂಬ ಸದಸ್ಯರನ್ನು ಒಳಗೊಂಡ ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲೂ ಕತ್ಯಾಲ್ ಅವರನ್ನು ಇ.ಡಿ ಬಂಧಿಸಿತ್ತು.
ಮನೆ ಖರೀದಿದಾರರಿಗೆ ₹500 ಕೋಟಿ ವಂಚನೆಯ ಮಗದೊಂದು ಪ್ರಕರಣದಲ್ಲಿ ಕತ್ಯಾಲ್ ವಿರುದ್ಧ ಇ.ಡಿ ಆಗಸ್ಟ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.