ADVERTISEMENT

ಬಂಡಾಯ ಬಣದ ಸಚಿವರು 24 ಗಂಟೆಗಳಲ್ಲಿ ತಮ್ಮ ಸ್ಥಾನ ಕಳೆದುಕೊ‌ಳ್ಳಲಿದ್ದಾರೆ: ರಾವುತ್

ಪಿಟಿಐ
Published 25 ಜೂನ್ 2022, 15:33 IST
Last Updated 25 ಜೂನ್ 2022, 15:33 IST
ಸಂಜಯ್ ರಾವುತ್: ಶಿವಸೇನಾ ಸಂಸದ
ಸಂಜಯ್ ರಾವುತ್: ಶಿವಸೇನಾ ಸಂಸದ   

ಮುಂಬೈ: ಏಕನಾಥ್ ಶಿಂಧೆ ಬಣದ ಬಂಡಾಯ ಸಚಿವರು 24 ಗಂಟೆಗಳಲ್ಲಿ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಶಿಂಧೆ ಜೊತೆ ಸೇರಿ ಬಂಡಾಯದ ಬಾವುಟ ಹಾರಿಸಿರುವ ಸಚಿವರು ಮತ್ತು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷದ ಅಧ್ಯಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆಗೆ ಮಧ್ಯಾಹ್ನ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧಿಕಾರ ನೀಡಲಾಗಿತ್ತು.

ಇದರ ಬೆನ್ನಲ್ಲೇ, ಸಂಜೆ ಮರಾಠಿ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಸಂಜಯ್ ರಾವುತ್, ಬಂಡಾಯ ಬಣದ ಸಚಿವರು ಶಾಸಕರನ್ನು ಕಿತ್ತೊಗೆಯುವ ಪ್ರಕ್ರಿಯೆ ಆರಂಭವಾಗಿದೆ. ಶಿವಸೇನೆ ಪಕ್ಷದ ನಿಷ್ಠಾವಂತರೆಂದು ಪರಿಗಣಿಸಿ ಗುಲಾಬ್‌ರಾವ್ ಪಾಟೀಲ್, ದಾದಾ ಭುಸೆ, ಸಾಂದಿಪನ್ ಭುಮ್ರೆ ಅವರಿಗೆ ಸಿಎಂ ಉದ್ಧವ್ ಠಾಕ್ರೆ ಸಚಿವ ಸ್ಥಾನ ನೀಡಿದ್ದರು. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು. ಆದರೆ, ಅವರು ತಪ್ಪು ಹಾದಿ ತುಳಿದಿದ್ದಾರೆ. 24 ಗಂಟೆಗಳಲ್ಲಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಶಂಬುರಾಜ್ ದೇಸಾಯಿ, ಅಬ್ದುಲ್ ಸತ್ತಾರ್ ಮತ್ತು ಬಚ್ಚು ಕಡು ಬಂಡಾಯ ಬಣದಲ್ಲಿರುವ ಇನ್ನಿತರ ಸಚಿವರಾಗಿದ್ದಾರೆ. ಕಡು ಅವರು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮಿತ್ರ ಪಕ್ಷ ಪ್ರಹಾರ್ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿದ್ದಾರೆ.

ಬಿಜೆಪಿ ಜೊತೆ ಶಿವಸೇನಾ ಮೈತ್ರಿ ಮಾಡಿಕೊಂಡಿದ್ದಾಗ ಮುಖ್ಯಮಂತ್ರಿ ಸ್ಥಾನವು ಎರಡು ಪಕ್ಷಗಳ ನಡುವೆ ರೊಟೇಟ್ ಆಗಬೇಕೆಂದು ಕೇಳಿದ್ದೆವು. ಉನ್ನತ ಹುದ್ದೆಗೆ ಶಿಂಧೆ ಅವರ ಹೆಸರು ಉದ್ಧವ್ ಅವರ ಮನದಲ್ಲಿತ್ತು. 2019ರ ಚುನಾವಣೆ ಬಳಿಕ ಸಿಎಂಗಾದಿ ವಿಚಾರವಾಗಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಬಿದ್ದಿದ್ದರಿಂದ ಎನ್‌ಸಿಪಿ, ಕಾಂಗ್ರೆಸ್ ಜೊತೆ ನಾವು ಮೈತ್ರಿ ಮಾಡಿಕೊಂಡೆವು ಎಂದು ರಾವುತ್ ಹೇಳಿದ್ದಾರೆ.

ಇದೇವೇಳೆ, ಬಂಡಾಯ ಬಣದ ಅರ್ಧದಷ್ಟು ಶಾಸಕರಿಗೆ ಹಿಂದುತ್ವದ ಚಿಂತೆ ಇಲ್ಲ. ಅವರ ಮೇಲೆ ಇ.ಡಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.