
ಸ್ಪೋಟದಲ್ಲಿ ಬೆಂಕಿಗಾಹುತಿಯಾದ ವಾಹನಗಳು..
ಪಿಟಿಐ
ನವದೆಹಲಿ: ‘ವೈಟ್ ಕಾಲರ್ ಭಯೋತ್ಪಾದಕ ಜಾಲ’ ಪ್ರಕರಣದಲ್ಲಿ ಬಂಧಿರಾಗಿರುವ ವೈದ್ಯರು ದೆಹಲಿ ಕೆಂಪು ಕೋಟೆ ಸಮೀಪ ನಡೆದ ಸ್ಫೋಟಕ್ಕೆ ವಸ್ತುಗಳನ್ನು ಕೊಳ್ಳಲು ₹ 26 ಲಕ್ಷ ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಆರೋಪಿಗಳಾದ ಡಾ. ಮುಜಮ್ಮಿಲ್ ಘನೀ, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಹೀನ್ ಸಯೀದ್ ಹಾಗೂ ಡಾ. ಉಮರ್ ನಬಿ ಸೇರಿ ಹಣ ಸಂಗ್ರಹಿಸಿದ್ದಾರೆ. ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಹಾಗೂ ಕಾರ್ಯಾಚರಣೆಯ ಅಗತ್ಯಗಳಿಗೆ ಬಳಸಿಕೊಳ್ಳಲು ಡಾ. ಉಮರ್‌ಗೆ ಹಸ್ತಾಂತರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್–ಫಲಾಹ್ ವಿಶ್ವ ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕನಾಗಿರುವ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದವನಾದ ಡಾ. ಉಮರ್, ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ.
ಸಂಗ್ರಹಿಸಿದ ಹಣ, ಭಾರಿ ಪ್ರಮಾಣದ ಭಯೋತ್ಪಾದಕ ಸಂಚಿಗೆ ಸಂಬಂಧ ಇರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಸಂಗ್ರಹಿಸಿದ ಹಣದಿಂದ ಕಚ್ಚಾ ಬಾಂಬ್ ತಯಾರಿಕೆಗೆ ಗುರುಗ್ರಾಮ, ನುಹ್ ಹಾಗೂ ಸಮೀಪದ ಪ್ರದೇಶಗಳಿಂದ ₹ 3 ಲಕ್ಷ ಮೌಲ್ಯದ 26 ಕ್ವಿಂಟಾಲ್ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ರಸಗೊಬ್ಬರ (ಎನ್‌ಪಿಕೆ ರಸಗೊಬ್ಬರ) ಖರೀದಿ ಮಾಡಿದ್ದರು.
ರಸಗೊಬ್ಬರವನ್ನು ಇತರ ರಾಸಾಯನಿಕಗೊಂದಿಗೆ ಬೆರೆಸಿ ಕಚ್ಚಾ ಬಾಂಬ್ ತಯಾರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಮಾಣದ ರಸಗೊಬ್ಬರ ಖರೀದಿ ಮಾಡಿದ್ದೇ ಸದ್ಯ ನಡೆಯುತ್ತಿರುವ ತನಿಖೆಯ ಪ್ರಮುಖ ಅಂಶ. ಹಣಕಾಸು ವಹಿವಾಟುಗಳನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಫೋಟಕ್ಕೆ ಕೆಲವು ದಿನಗಳ ಮೊದಲು ಉಮರ್ ಮತ್ತು ಮುಜಮ್ಮಿಲ್ ನಡುವೆ ಹಣ ನಿರ್ವಹಣೆಯ ಬಗ್ಗೆ ಭಿನ್ನಾಭಿಪ್ರಾಯ ಉದ್ಭವಿಸಿತ್ತು ಎಂದು ಮೂಲಗಳು ತಿಳಿಸಿವೆ. ಈ ವಿವಾದವು ಗುಂಪಿನ ಯೋಜನೆಗಳ ಮೇಲೆ ಪರಿಣಾಮ ಬೀರಿದೆಯೇ ಅಥವಾ ದಾಳಿಯ ಸಮಯದ ಮೇಲೆ ಪರಿಣಾಮ ಬೀರಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.