ನವದೆಹಲಿ: ಯಮುನಾ ನದಿ ನೀರಿಗೆ ಹರಿಯಾಣದ ಬಿಜೆಪಿ ಸರ್ಕಾರ ಅಮೋನಿಯಾ ಬೆರೆಸಿದೆ ಎಂದು ಆರೋಪ ಮಾಡಿದ್ದಕ್ಕೆ ಚುನಾವಣಾ ಆಯೋಗ ಜಾರಿ ಮಾಡಿದ್ದ ಎರಡನೇ ನೋಟಿಸ್‌ಗೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಶುಕ್ರವಾರ ಉತ್ತರ ನೀಡಿದರು.
ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಜತೆಗೆ ಕೇಜ್ರಿವಾಲ್ ಅವರು ಚುನಾವಣಾ ಆಯೋಗದ ಕಚೇರಿಗೆ ಖುದ್ದು ಭೇಟಿ ನೀಡಿ, ಉತ್ತರ ಸಲ್ಲಿಸಿದರು.
ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸಲ್ಲಿಸಿರುವ ಆರು ಪುಟಗಳ ಉತ್ತರದಲ್ಲಿ, ‘ದೆಹಲಿಗೆ ಪೂರೈಕೆಯಾಗುತ್ತಿರುವ ಸಂಸ್ಕರಿಸದ ಯಮುನಾ ನದಿ ನೀರಿನಲ್ಲಿ ಅಮೋನಿಯಾ ಮಟ್ಟ ಅತೀ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಗಮನಿಸಿ ಈ ಹೇಳಿಕೆ ನೀಡಿದ್ದೇನೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ರಾಷ್ಟ್ರ ರಾಜಧಾನಿಗೆ ಅತೀ ಹೆಚ್ಚು ಮಲೀನಗೊಂಡಿರುವ ನೀರನ್ನು ಹರಿಸುವ ಮೂಲಕ ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಪಿತೂರಿ ನಡೆಸಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದರು.
‘ಇದರಲ್ಲಿ ಹರಿಯಾಣ ಮುಖ್ಯಮಂತ್ರಿ ತಪ್ಪೆಸಗಿದ್ದಾರೆ. ರಾಜಧಾನಿಯ ಜನರಿಗೆ ಸಂಕಷ್ಟ ತರಲು ಯತ್ನಿಸಿದ್ದಕ್ಕಾಗಿ ಸೈನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಂತಹ ದುಷ್ಕೃತ್ಯ ಎಸಗಿರುವ ಹರಿಯಾಣ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಅಮೋನಿಯಾ ಬೆರಕೆಯಾಗಿರುವ ನೀರನ್ನು ಮೂರು ಬಾಟಲಿಗಳಲ್ಲಿ ತುಂಬಿಕೊಂಡು ತಂದಿದ್ದ ಕೇಜ್ರಿವಾಲ್ ಅವರು, ಈ ನೀರನ್ನು ತಮ್ಮ ಮನೆಗೆ ಕೊಂಡೊಯ್ದು ಪರಿಶೀಲಿಸುವಂತೆ ಮನವಿ ಮಾಡಿದರು.
ಮೊದಲ ನೋಟಿಸ್‌ಗೆ ಕೇಜ್ರಿವಾಲ್ ಅವರು ನೀಡಿದ್ದ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದ ಆಯೋಗವು, ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಶುಕ್ರವಾರದೊಳಗೆ ಒದಗಿಸದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎರಡನೇ ನೋಟಿಸ್ ಜಾರಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.