ADVERTISEMENT

ಜಿಎಸ್‌ಟಿ ಪಾಲು ನಿರಾಕರಣೆ: ಕೇಂದ್ರದಿಂದ ರಾಜ್ಯಗಳಿಗೆ ದ್ರೋಹ –ಸೋನಿಯಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 11:45 IST
Last Updated 26 ಆಗಸ್ಟ್ 2020, 11:45 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಪಾಲನ್ನು ನೀಡಲು ನಿರಾಕರಿಸಿರುವುದು ದ್ರೋಹ ಮಾಡಿದಂತೆ ಎಂದು ಕಾಂಗ್ರೆಸ್‌ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.

ಜಿಎಸ್‌ಟಿ ಬಾಕಿ ಸೇರಿದಂತೆ ಜೆಇಇ, ನೀಟ್, ಯುಜಿಸಿ ಪರೀಕ್ಷೆಗಳ ವಿಷಯ ಕುರಿತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೇಂದ್ರ ಸರ್ಕಾರ
ರಾಜ್ಯಗಳಿಗೆ ಸಕಾಲದಲ್ಲಿ ಜಿಎಸ್‌ಟಿ ಪಾಲು ನೀಡಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಕಾನೂನಿನ ನಿರ್ಣಯವಾಗಿದೆ. ರಾಜ್ಯಗಳಿಂದ ಜಿಎಸ್‌ಟಿ ಸಂಗ್ರಹವಾಗಿದ್ದರೂ ಕೇಂದ್ರ ಸರ್ಕಾರ ಪಾಲು ನೀಡುತ್ತಿಲ್ಲ, ಇದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿದೆ. ಇನ್ನು ಮೂರ ವಾರಗಳಲ್ಲಿ ಸಂಸತ್‌ ಕಲಾಪ ಆರಂಭವಾಗಲಿದ್ದು ಸಮನ್ವಯದ ಹೋರಾಟ ಮಾಡಬೇಕಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ADVERTISEMENT

ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸಕ್ತ ವರ್ಷದಲ್ಲಿ ರಾಜ್ಯಗಳಿಗೆ ಶೇ.14ರಷ್ಟು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ನರೇಂದ್ರ ಮೋದಿ ಸರ್ಕಾರದ ಈ ಕ್ರಮ ರಾಜ್ಯ ಸರ್ಕಾರಗಳಿಗೆ ಮತ್ತು ದೇಶ ಜನತೆಗೆ ಮಾಡಿದ ದ್ರೋಹ ಎಂದು ಅವರು ಹೇಳಿದ್ದಾರೆ.

ಕೃಷಿ ಮಾರುಕಟ್ಟೆ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸದೆ ಸುಗ್ರೀವಾಜ್ಞೆ ಹೊರಡಿಸಿರುವುದು, ಪರಿಸರ ನೀತಿಗೆ ಅಧಿಸೂಚನೆ, ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡಿರುವುದು, 6 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡಿರುವುದು, ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರದ ಕ್ರಮಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದರು.

ಹೊಸ ಶಿಕ್ಷಣ ನೀತಿಯು ಪ್ರಗತಿಪರ, ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆ ಎಂದು ಸೋನಿಯಾ ಗಾಂಧಿ ಕೇಂದ್ರದ ಕ್ರಮಗಳನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.