ADVERTISEMENT

ಗಣರಾಜ್ಯೋತ್ಸವ: ಗುಜರಾತ್‌ನಿಂದ 'ಬುಡಕಟ್ಟು ಜನಾಂಗದ ಹತ್ಯಾಕಾಂಡ'ದ ಸ್ತಬ್ಧಚಿತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2022, 3:23 IST
Last Updated 23 ಜನವರಿ 2022, 3:23 IST
ಗುಜರಾತ್‌ ಸ್ತಬ್ಧಚಿತ್ರ
ಗುಜರಾತ್‌ ಸ್ತಬ್ಧಚಿತ್ರ   

ನವದೆಹಲಿ: ಜನವರಿ 26, ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಬುಡಕಟ್ಟು ಜನಾಂಗದ ಸ್ವಾತಂತ್ರ್ಯಕ್ಕಾಗಿ ಪಾಲ್‌ ಮತ್ತು ದಧವಾವ್‌ ಹಳ್ಳಿಗರ ಹೋರಾಟದ ಕತೆ ಹೇಳುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಗುಜರಾತ್‌ ಸರ್ಕಾರ ಶನಿವಾರ ತಿಳಿಸಿದೆ.

'ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 1,200 ಮಂದಿಯನ್ನು ಬ್ರಿಟಿಷರು ಹತ್ಯೆ ಮಾಡಿದ್ದಾರೆ. ಇದು ಜಲಿಯಾನ್‌ ವಾಲಾಬಾಗ್‌ ಹತ್ಯಾಕಾಂಡಕ್ಕಿಂತ ಭೀಕರವಾಗಿದೆ. ಇದುವರೆಗೆ ಕೇಳಿರದ ಬುಡಕಟ್ಟು ಮಂದಿಯ ಶೌರ್ಯ ಮತ್ತು ಬಲಿದಾನದ ಕಥೆಯನ್ನು ಸ್ತಬ್ಧಚಿತ್ರ ಹೇಳಲಿದೆ' ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.

ಸುಮಾರು 100 ವರ್ಷಗಳ ಹಿಂದೆ ಉತ್ತರ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಪಾಲ್‌ ಮತ್ತು ದಧವಾವ್‌ ಹಳ್ಳಿಗಳಲ್ಲಿ ನಡೆದ ಘಟನೆ ಇದಾಗಿದೆ. 'ಗುಜರಾತ್‌ನ ಬುಡಕಟ್ಟು ಕ್ರಾಂತಿಕಾರಿಗಳು' ಎಂಬ ತಲೆಬರಹ ಹೊಂದಿರುವ ಸ್ತಬ್ಧಚಿತ್ರ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ.

ADVERTISEMENT

'ಕೊಲಿಯಾರಿ ಗಾಂಧಿ' ಎಂದೇ ಪರಿಚಿತ ಮೋತಿಲಾಲ್‌ ತೇಜವತ್‌ ಅವರ ನೇತೃತ್ವದಲ್ಲಿ ಬುಡಕಟ್ಟು ಮಂದಿ ಹೋಳಿ ಹಬ್ಬಕ್ಕಿಂತ ಮೊದಲು, ಅಮಲ್ಕಿ ಏಕಾದಶಿ ದಿನ (ಮಾರ್ಚ್‌ 7, 1922) ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ನೆರೆದಿದ್ದರು. ಇದೇ ವೇಳೆ ಮೇವಾಡ್‌ ಭಿಲ್‌ ಕಾರ್ಪ್ಸ್‌ನ ಸೈನಿಕರು ಆಗಮಿಸಿದ್ದರು. ಮೇಜರ್‌ ಎಚ್‌ ಜಿ ಸ್ಯಾಟರ್ನ್‌ ಆದೇಶದಂತೆ ಅಮಾಯಕ ಬುಡಕಟ್ಟು ಜನರ ಮೇಲೆ ಗುಂಡಿನ ಮಳೆಗರೆದರು. ಈ ದುರ್ಘಟನೆಯಲ್ಲಿ ಸುಮಾರು 1,200 ಮಂದಿ ಕೊಲ್ಲಲ್ಪಟ್ಟರು' ಎಂದು ಗುಜರಾತ್‌ ಸರ್ಕಾರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.