
ರಾಷ್ಟ್ರಪತಿ ದ್ರೌಪದಿ ಹಾಗೂ ಶುಭಾಂಶು ಶುಕ್ಲಾ
ಕೃಪೆ: ಪಿಟಿಐ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಗಣರಾಜ್ಯೋತ್ಸವದಂದು (ಸೋಮವಾರ) ಗಗನಯಾನಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ 'ಅಶೋಕ ಚಕ್ರ'ವನ್ನು ಪ್ರದಾನ ಮಾಡಿದರು.
ಭಾರತೀಯ ವಾಯುಸೇನೆಯ ಪೈಲಟ್ ಆಗಿರುವ ಶುಕ್ಲಾ, Su-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯೆರ್ ಹಾಗೂ An-32 ಸೇರಿದಂತೆ ವಿವಿಧ ಯುದ್ಧ ವಿಮಾನಗಳಲ್ಲಿ ಸುಮಾರು 2,000 ಗಂಟೆ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.
ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯ
ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 2025ರ ಜೂನ್ 26ರಂದು 'ಆಕ್ಸಿಯಮ್ -4' ಕಾರ್ಯಾಚರಣೆಯ ಭಾಗವಾಗಿ ಉಡಾವಣೆ ಮಾಡಿದ್ದ ಸ್ಪೇಸ್‌ಎಕ್ಸ್‌ನ ಡ್ರಾಗನ್ ನೌಕೆ ಮೂಲಕ ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದರು. ಅದರೊಂದಿಗೆ, ಐಎಸ್‌ಎಸ್‌ನಲ್ಲಿ ಕಾಲಿಟ್ಟ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಭಾಜನರಾಗಿದ್ದರು.
ಒಟ್ಟಾರೆಯಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಎರಡನೇ ಭಾರತೀಯ ಎಂಬ ಖ್ಯಾತಿ ಶುಕ್ಲಾ ಅವರದ್ದು. ಅವರಿಗೂ ಮೊದಲು ರಾಕೇಶ್ ಶರ್ಮಾ ಈ ಸಾಧನೆ ಮಾಡಿದ್ದರು.
ಶುಕ್ಲಾ ಅವರನ್ನು ಉತ್ತರ ಪ್ರದೇಶ ಸರ್ಕಾರವೂ ಇತ್ತೀಚೆಗೆ ಗೌರವಿಸಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಪರಿಗಣಿಸಿ, 'ಉತ್ತರ ಪ್ರದೇಶ ಗೌರವ ಸಮ್ಮಾನ' ಪ್ರದಾನ ಮಾಡಿದೆ.
ಲಖನೌ ಮೂಲದ ಶುಕ್ಲಾ ಅವರು, 2006ರ ಜೂನ್‌ನಲ್ಲಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.