ADVERTISEMENT

ಜನವರಿ 31ರ ವರೆಗೆ ನೋಯ್ಡಾದಲ್ಲಿ ಸೆಕ್ಷನ್ 144 ಜಾರಿ: ಪ್ರತಿಭಟನೆಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 5:20 IST
Last Updated 23 ಜನವರಿ 2021, 5:20 IST
   

ನೋಯ್ಡಾ: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸುರಕ್ಷತೆಯ ದೃಷ್ಟಿಯಿಂದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಜನವರಿ 31ರ ವರೆಗೆ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ಈ ಸಂಬಂಧ ಹೆಚ್ಚುವರಿ ಪೊಲೀಸ್‌ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಶುತೋಷ್‌ ದ್ವಿವೇದಿ ಅವರು, ‘ಖಾಸಗಿ ಡ್ರೋಣ್‌ಗಳನ್ನು ಬಳಸುವಂತಿಲ್ಲ. ಆಡಳಿತದ ಅನುಮತಿ ಇಲ್ಲದೆ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಟ್ರಾಫಿಕ್‌ ಜಾಮ್ ಆಗುವಂತಿಲ್ಲ. ಹಾನಿಕಾರಕ ವಸ್ತುಗಳನ್ನು ಬಳಸುವಂತಿಲ್ಲ. ಸೂಕ್ಷ್ಮ ವಿಚಾರವನ್ನೊಳಗೊಂಡ ಆಡಿಯೊ–ವಿಡಿಯೊ ಹಂಚಿಕೊಳ್ಳುವಂತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನಕ್ಕೆ ಅನುಮತಿ ಇಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಆದೇಶವು ಗೌತಮ ಬುದ್ಧ ನಗರದಲ್ಲಿ ಜನವರಿ 22ರಿಂದ 31ರ ವರೆಗೆ ಜಾರಿಯಲ್ಲಿರಲಿದೆ. ಯಾವುದೇ ವ್ಯಕ್ತಿ ಇದನ್ನು ಉಲ್ಲಂಘಿಸುವುದು ಕಂಡುಬಂದರೆ, ಐಪಿಸಿ ಸೆಕ್ಷನ್‌ 188ರ (ಸರ್ಕಾರ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಗೌತಮ ಬುದ್ಧ ನಗರದಿಂದ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ. ಜೊತೆಗೆ ಅನಗತ್ಯ ಚಟುವಟಿಕೆಗಳು ನಡೆಯುವ ಆತಂಕ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ 'ಏಕಪಕ್ಷೀಯವಾಗಿ' ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 24ರಂದು ಉತ್ತರ ಪ್ರದೇಶ ಸ್ಥಾಪನಾ ದಿನದ ಅಂಗವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.