ADVERTISEMENT

ತೆಲಂಗಾಣ ಚುನಾವಣಾ ಪ್ರಚಾರ: ಕೆಸಿಆರ್‌ ಸಭೆಗೆ ರೇವಂತ್‌ಗೆ ದಿಗ್ಬಂಧನ

‘ತೆಲಂಗಾಣದ ಮಗಳು’ ಸುಹಾಸಿನಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 20:15 IST
Last Updated 4 ಡಿಸೆಂಬರ್ 2018, 20:15 IST
ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ
ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ   

ಹೈದರಾಬಾದ್‌: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಮೆಹಬೂಬ್‌ನಗರದ ಕೋಡಂಗಲ್‌ನಲ್ಲಿ ಯಾವುದೇ ಅಡ್ಡಿ ಇಲ್ಲದೆ ಸಾರ್ವಜನಿಕ ಸಮಾವೇಶ ನಡೆಸುವುದಕ್ಕಾಗಿ ಆ ಕ್ಷೇತ್ರದ ಅಭ್ಯರ್ಥಿ ಮತ್ತು ತೆಲಂಗಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ರೇವಂತ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕವೇ ಮುಖ್ಯ ಚುನಾವಣಾ ಅಧಿಕಾರಿ ರಜತ್‌ ಕುಮಾರ್‌ ಅವರು ರೆಡ್ಡಿ ಅವರ ಬಿಡುಗಡೆಗೆ ನಿರ್ದೇಶನ ನೀಡಿದರು.

ಮಂಗಳವಾರ ಬೆಳಿಗ್ಗಿನ ಜಾವ ಮೂರು ಗಂಟೆಗೆ ಘಟನಾವಳಿಗಳು ಆರಂಭಗೊಂಡವು. ಭಾರಿ ಸಂಖ್ಯೆಯ ಪೊಲೀಸರು ರೆಡ್ಡಿ ಅವರ ಕೋಡಂಗಲ್‌ನ ಮನೆಯ ಮಲಗುವ ಕೋಣೆಗೇ ನುಗ್ಗಿ ರೆಡ್ಡಿ ಅವರನ್ನು ವಶಕ್ಕೆ ಪಡೆದರು. ‘ಯಾಕೆ ಬಂಧಿಸುತ್ತಿದ್ದೀರಿ ಮತ್ತು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ’ ಎಂದು ಹೆಂಡತಿ ಗೀತಾ ಕೇಳಿದ ಪ್ರಶ್ನೆಗೆ ಪೊಲೀಸರು ಯಾವ ಉತ್ತರವನ್ನೂ ಕೊಡಲಿಲ್ಲ.

ಉಸ್ತುವಾರಿ ಮುಖ್ಯಮಂತ್ರಿಯೂ ಆಗಿರುವ ಕೆಸಿಆರ್‌ ಅವರ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಮಾಡಬಾರದು ಎಂದು ಪೊಲೀಸರು ರೆಡ್ಡಿ ಅವರಿಗೆ ಸೋಮವಾರ ನೋಟಿಸ್‌ ನೀಡಿದ್ದರು. ಕೆಸಿಆರ್‌ ಅವರು ರ್‍ಯಾಲಿಗಾಗಿ ಬಂದಾಗ ಪ್ರತಿಭಟನೆ ನಡೆಸಬೇಕು ಮತ್ತು ಅಂದು ಕೋಡಂಗಲ್‌ ಬಂದ್‌ ನಡೆಸಬೇಕು ಎಂದು ರೆಡ್ಡಿ ತಮ್ಮ ಬೆಂಬಲಿಗರಿಗೆ ಕರೆ ಕೊಟ್ಟಿದ್ದರು. ಬಂದ್‌ ಕರೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್‌ ಹೇಳಿತ್ತು. ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಕೋಡಂಗಲ್‌ ಪಟ್ಟಣದಿಂದ 15 ಕಿ.ಮೀ. ದೂರದ ಕೊಸ್ಗಿ ಎಂಬಲ್ಲಿ ಕೆಸಿಆರ್‌ ಅವರ ಕಾರ್ಯಕ್ರಮ ನಿಗದಿಯಾಗಿತ್ತು.

ADVERTISEMENT

ರೆಡ್ಡಿ ಅವರನ್ನು ಪೊಲೀಸರು ಇರಿಸಿದ್ದ ಸ್ಥಳದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ರೆಡ್ಡಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಮುಖಂಡ ವೇಮ ನರೇಂದ್ರ ರೆಡ್ಡಿ ಅವರು ಹೈದರಾಬಾದ್‌ ಹೈಕೋರ್ಟ್‌ಗೆ ಮಂಗಳವಾರ ಮಧ್ಯಾಹ್ನ ಅರ್ಜಿ ಸಲ್ಲಿಸಿದರು.

ರೆಡ್ಡಿ ಅವರನ್ನು ಯಾಕೆ ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಯನ್ನು ಹೈಕೋರ್ಟ್‌ ಪ್ರಶ್ನಿಸಿತು. ಯಾವ ಗುಪ್ತಚರ ವರದಿ ಆಧರಿಸಿ ರೆಡ್ಡಿ ಅವರನ್ನು ಬಂಧಿಸಲಾಗಿದೆಯೋ ಅದನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು.

ಮಂಗಳವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ, ವಶಕ್ಕೆ ಪಡೆದು 12 ತಾಸು ಬಳಿಕ ರೆಡ್ಡಿ ಅವರನ್ನು ಬಿಡುಗಡೆ ಮಾಡಲಾಯಿತು. ಭಾರಿ ಭದ್ರತೆಯಲ್ಲಿ ಅವರನ್ನು ಹೊರಗೆ ಕರೆದುಕೊಂಡು ಹೋಗುವ ಮೊದಲು ಔಷಧ ಕೊಡಲು ಬೆಂಬಲಿಗರಿಗೆ ಅವಕಾಶ ಕೊಡಲಾಯಿತು.

ಕೆಸಿಆರ್‌ ಅವರ ರ್‍ಯಾಲಿ ಕೊಸ್ಗಿಯಲ್ಲಿ ನಿರಾತಂಕವಾಗಿ ನಡೆಯಿತು. ಈ ಸಮಾವೇಶದಲ್ಲಿ ರೆಡ್ಡಿ ಅವರ ಬಗ್ಗೆ ಕೆಸಿಆರ್‌ ಪ್ರಸ್ತಾಪವನ್ನೇ ಮಾಡಲಿಲ್ಲ. ಮೆಹಬೂಬ್‌ನಗರ ಜಿಲ್ಲೆಯ ಎಲ್ಲ 14 ಕ್ಷೇತ್ರಗಳಲ್ಲಿ ಟಿಆರ್‌ಎಸ್‌ ಗೆಲ್ಲಲಿದೆ ಎಂದಷ್ಟೇ ಹೇಳಿದರು.

‘ತೆಲಂಗಾಣದ ಮಗಳು’ ಸುಹಾಸಿನಿ
ಹೈದರಾಬಾದ್‌ (ಪಿಟಿಐ): ಟಿಡಿಪಿ ಸ್ಥಾಪಕ ಎನ್‌.ಟಿ. ರಾಮರಾವ್‌ ಅವರ ಮೊಮ್ಮಗಳು ಸುಹಾಸಿನಿ ಅವರು ರಾಜಕೀಯ ಪ್ರವೇಶಿಸಿ ಹೈದರಾಬಾದ್‌ನ ಕುಕಟಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದರೊಂದಿಗೆ ತೆಲಂಗಾಣ ರಾಜಕಾರಣ ಹೊಸ ಆಯಾಮ ಪಡೆದುಕೊಂಡಿದೆ. ಚುನಾವಣೆಯು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ಕೆ. ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್‌

ನಡುವಣ ಹೋರಾಟ ಎಂದು ಬಿಂಬಿತವಾಗಿದೆ.

ಸುಹಾಸಿನಿ

ಆಂಧ್ರ ಪ್ರದೇಶದಲ್ಲಿ ಟಿಡಿಪಿಯ ವಿರುದ್ಧ ಇರುವ ಎಲ್ಲ ಪಕ್ಷಗಳು ಟಿಆರ್‌ಎಸ್‌ಗೆ ಬೆಂಬಲ ಘೋಷಿಸಿವೆ. ಸುಹಾಸಿನಿ ವಿರುದ್ಧ ಟಿಆರ್‌ಎಸ್‌ನ ಎಂ. ಕೃಷ್ಣರಾವ್‌ ಸ್ಪರ್ಧಿಸಿದ್ದಾರೆ. 2014ರ ಚುನಾವಣೆಯಲ್ಲಿ ಅವರು ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಅವರು ಟಿಆರ್‌ಎಸ್‌ಗೆ ಪಕ್ಷಾಂತರ ಮಾಡಿದ್ದರು.

ಚಂದ್ರ ಬಾಬು ನಾಯ್ಡು ಅವರು ಎರಡು ದಿನಗಳ ಹಿಂದೆ ಸುಹಾಸಿನಿ ಪರವಾಗಿ ಇಲ್ಲಿ ರೋಡ್‌ಷೋ ನಡೆಸಿದ್ದರು.

ತಾವು ಹೈದರಾಬಾದ್‌ನಲ್ಲಿಯೇ ಹುಟ್ಟಿ ಬೆಳೆದವರು. ಹಾಗಾಗಿ ತಾವು ತೆಲಂಗಾಣದ ಮಗಳು ಎಂದು ಸುಹಾಸಿನಿ ಹೇಳಿಕೊಳ್ಳುತ್ತಿದ್ದಾರೆ.
ಆಂಧ್ರ ಪ್ರದೇಶದಿಂದ ಬಂದು ನೆಲೆಯಾದವರ ಸಂಖ್ಯೆ ಕುಕಟಪಲ್ಲಿ ಕ್ಷೇತ್ರದಲ್ಲಿ ಗಣನೀಯವಾಗಿದೆ. ಹಾಗಾಗಿ ಸುಹಾಸಿನಿ ಅವರ ಕ್ಷೇತ್ರ ಆಯ್ಕೆ ಸಮರ್ಪಕವಾಗಿದೆ ಎಂದು ಟಿಡಿಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಟಿಆರ್‌ಎಸ್‌ ಸರ್ಕಾರದ ಜನಪ್ರಿಯತೆಯನ್ನೇ ಕೃಷ್ಣರಾವ್‌ ನೆಚ್ಚಿಕೊಂಡಿದ್ದಾರೆ. ಸುಹಾಸಿನಿ ಅವರು ಕುಕಟಪಲ್ಲಿಯಲ್ಲಿ ಸ್ಪರ್ಧಿಸಿರುವುದು ಹೈದರಾಬಾದ್‌ನ ಇತರ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸುಹಾಸಿನಿ ಅವರು ಎನ್‌ಟಿಆರ್‌ ಮಗ ಹರಿಕೃಷ್ಣ ಅವರ ಮಗಳು. ಹರಿಕೃಷ್ಣ ಅಪಘಾತವೊಂದರಲ್ಲಿ ಇತ್ತೀಚೆಗೆ ಮೃತಪಟ್ಟರು. ಸುಹಾಸಿನಿ ಸಹೋದರರಾದ ಜೂನಿಯರ್‌ ಎನ್‌ಟಿಆರ್‌ ಮತ್ತು ಕಲ್ಯಾಣರಾಮ್‌ ತೆಲುಗಿನ ಜನಪ್ರಿಯ ನಟರು.

ವಾಕ್ಚಾತುರ್ಯ
* ಮೋದಿ ಸದಾ ‘ಭಾರತ್ ಮಾತಾಕಿ ಜೈ’ ಎನ್ನುತ್ತಿರುತ್ತಾರೆ. ಆದರೆ ಅನಿಲ್ ಅಂಬಾನಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಇನ್ನು ಮುಂದೆ ಅವರು ‘ಅನಿಲ್ ಅಂಬಾನಿಕಿ ಜೈ’ ಎನ್ನಲಿ
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

* ‘ಭಾರತ ಮಾತಾ ಕೀ ಜೈ’ ಎಂದು ಹೇಳುವ ಮೂಲಕ ನಾನು ಭಾಷಣ ಆರಂಭಿಸಬಾರದು ಎಂದು ಕಾಂಗ್ರೆಸ್‌ನ ‘ನಾಮ್‌ಧಾರ್‌’ (ರಾಹುಲ್‌) ಫತ್ವಾ ಹೊರಡಿಸಿದ್ದಾರೆ. ಹಾಗಾಗಿ, ಲಕ್ಷಾಂತರ ಜನರ ಎದುರಿನಲ್ಲಿ ನಾನು ಆ ಫತ್ವಾವನ್ನು ಮುರಿದು ಹಾಕುತ್ತಿದ್ದೇನೆ. ಭಾರತ ಮಾತಾಕಿ ಜೈ ಎಂದು ಹತ್ತು ಬಾರಿ ಹೇಳುತ್ತಿದ್ದೇನೆ. ನಿಮಗೆ ನಾಚಿಕೆಯಾಗಬೇಕು. ಸ್ವಾತಂತ್ರ್ಯ ಹೋರಾಟಗಾರರು ಭಾರತ ಮಾತಾ ಕೀ ಜೈ ಎಂದು ಕೂಗುತ್ತಾ ಜೀವ ತೆತ್ತಿದ್ದಾರೆ.

–ನರೇಂದ್ರ ಮೋದಿ, ಪ್ರಧಾನಿ

* ಮತಯಂತ್ರಗಳನ್ನು ತಿರುಚುವುದಕ್ಕೆ ಅವಕಾಶ ಇದೆಯೇ ಎಂಬುದನ್ನು ಪರೀಕ್ಷಿಸಲು ಚುನಾವಣಾ ಆಯೋಗವು ಜನರಿಗೆ ಅವಕಾಶ ಕೊಡಬೇಕು. ಅವರ ಹೆಸರನ್ನು ಗೋಪ್ಯವಾಗಿ ಇರಿಸಬೇಕು. ಯಾಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮಗಿಂತ ಬಹಳ ಮುಂದೆ ಇರುವ ಅಮೆರಿಕ ಮತ್ತು ಇತರ ಹಲವು ದೇಶಗಳು ಮತಯಂತ್ರಗಳನ್ನು ಬಳಸುತ್ತಿಲ್ಲ. ಮತಯಂತ್ರಗಳ ಬಗೆಗಿನ ಸಂದೇಹಗಳು ಉಳಿದರೆ ಅವು ಇನ್ನಷ್ಟು ಗಂಭೀರವಾಗುತ್ತಾ ಹೋಗುತ್ತವೆ. ಅದು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಶುದ್ಧೀಕರಣಕ್ಕೆ ಗಮನಹರಿಸುತ್ತೇನೆ.

–ಉಮಾಭಾರತಿ, ಕೇಂದ್ರ ಸಚಿವೆ

* ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆ. ದೇಶದ 125 ಕೋಟಿ ಜನರೇ ಅವರ ಕುಟುಂಬ. ಅವರ ಅಭಿವೃದ್ಧಿಗಾಗಿ ಮೋದಿ ದಣಿವಿಲ್ಲದೆ ದುಡಿಯುತ್ತಿದ್ದಾರೆ. ಇನ್ನೊಂದೆಡೆ, ಟಿಆರ್‌ಎಸ್‌ನ ಮುಖ್ಯಸ್ಥ ಚಂದ್ರಶೇಖರ ರಾವ್‌ ಇದ್ದಾರೆ. ಅವರ ಮಗ ಕೆ.ಟಿ. ರಾಮರಾವ್‌ ಮತ್ತು ಮಗಳು ಕವಿತಾ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ಟಿಆರ್‌ಎಸ್‌ ಮುಖ್ಯಸ್ಥನಾಗಲು ಸಾಧ್ಯವೇ ಇಲ್ಲ. ಯಾರಿಗಾದರೂ ಅಂತಹ ಕನಸು ಇದ್ದರೆ ಅವರನ್ನು ಪಕ್ಷದಿಂದ ಹೊರಗೆ ಹಾಕಲಾಗುತ್ತದೆ

–ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

(ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.