ADVERTISEMENT

RIP Manmohan Singh: ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಯಾದ ಪ್ರಮುಖ ಕಾನೂನುಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2024, 13:37 IST
Last Updated 27 ಡಿಸೆಂಬರ್ 2024, 13:37 IST
<div class="paragraphs"><p>ಮನಮೋಹನ್‌ ಸಿಂಗ್‌</p></div>

ಮನಮೋಹನ್‌ ಸಿಂಗ್‌

   

ಪಿಟಿಐ ಚಿತ್ರ

ನವದೆಹಲಿ: ಆರ್ಥಿಕ ಸುಧಾರಣೆ, ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದ ಶ್ರೇಯ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಸಲ್ಲುತ್ತದೆ. ಆದರೆ ಅದಷ್ಟೇ ಅವರ ಸಾಧನೆಯಲ್ಲ. ಪ್ರಧಾನಿಯಾಗಿದ್ದಾಗ ಮಹತ್ವವೆನಿಸುವ ಇನ್ನಷ್ಟು ಕಾನೂನುಗಳನ್ನು ಅವರು ಜಾರಿಗೊಳಿಸಿದ್ದಾರೆ.

ADVERTISEMENT

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಡಾ. ಮನಮೋಹನ್‌ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಉದಾರೀಕರಣದ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಸುಧಾರಣೆಗೊಳಿಸಿದ್ದು ಪ್ರಮುಖ ಸಾಧನೆಯಾದರೂ, ದೇಶದ ಜನರ ಬದುಕು ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಉಂಟುಮಾಡುವ ಅನೇಕ ಕಾನೂನುಗಳನ್ನು ರೂಪಿಸಿದ ಖ್ಯಾತಿ ಅವರದ್ದು.

ಅವರ ಅಧಿಕಾರವಧಿಯಲ್ಲಿ ಜಾರಿಯಾದ ಐದು ಪ್ರಮುಖ ಕಾನೂನುಗಳ ಮಾಹಿತಿ ಇಲ್ಲಿದೆ.

ಉದ್ಯೋಗ ಖಾತರಿ

ಸಿಂಗ್‌ ಅವರು ಪ್ರಧಾನಿಯಾದ ಒಂದು ವರ್ಷದ ಬಳಿಕ (2005ರಲ್ಲಿ) ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ನರೇಗಾ/ಎಂಜಿಎನ್‌ಆರ್‌ಇಜಿಎ) ಜಾರಿಗೊಳಿಸಿತು. ಗ್ರಾಮೀಣ ಭಾರತದಲ್ಲಿನ ನಿರುದ್ಯೋಗ ಮತ್ತು ಬಡತನವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ತಳ ಸಮುದಾಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ.

ಈ ಯೋಜನೆಯು ಗ್ರಾಮೀಣ ಭಾಗದ ಕುಟುಂಬಗಳ ಜೀವನೋಪಾಯಕ್ಕಾಗಿ ಆರ್ಥಿಕ ಭದ್ರತೆ ಖಚಿತಪಡಿಸಲು ಕನಿಷ್ಠ 100 ದಿನಗಳ ಉದ್ಯೋಗದ ಖಾತರಿಯನ್ನು ಒದಗಿಸುತ್ತದೆ.

ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಯಪೇಯಿ ಅವರು ಘೋಷಿಸಿದ್ದ ಸರ್ವ ಶಿಕ್ಷಣ ಅಭಿಯಾನವನ್ನು ಮುಂದುವರಿಸುವುದರ ಜೊತೆಗೆ, ಸಿಂಗ್‌ ಆಡಳಿತದಲ್ಲಿ ಯುಪಿಎ ಸರ್ಕಾರವು ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯ್ದೆಯನ್ನು 2009ರಲ್ಲಿ ಜಾರಿಗೊಳಿಸಿತು. ಇದು 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತದೆ.

ಸೌಲಭ್ಯ ವಂಚಿತ ಪ್ರದೇಶಗಳಲ್ಲಿನ ಮಕ್ಕಳ ಆರೋಗ್ಯ ಸುಧಾರಣೆಗಾಗಿ 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯನ್ನು (ಎನ್‌ಆರ್‌ಎಚ್‌ಎಂ) ಆರಂಭಿಸಲಾಯಿತು.

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸಹ 2005ರಲ್ಲಿ ಜಾರಿಗೆ ಬಂದಿತು. ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಇದರ ಪಾತ್ರ ದೊಡ್ಡದು.

ಹಲವು ರಾಜ್ಯಗಳಲ್ಲಿ ಸರ್ಕಾರದ ಭ್ರಷ್ಟಾಚಾರಗಳು, ಜನವಿರೋಧಿ ನೀತಿಗಳನ್ನು ಬಯಲು ಮಾಡುವಲ್ಲಿ ಆರ್‌ಟಿಐ ಮಹತ್ವದ ಪಾತ್ರ ನಿರ್ವಹಿಸಿದೆ.

ಭೂ ಸ್ವಾಧೀನ ಕಾಯ್ದೆ

ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಉದ್ದೇಶಕ್ಕೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೊದಲು ಸಂತ್ರಸ್ತರ ಸಮ್ಮತಿ ಪಡೆಯಬೇಕು. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪುನರ್ವಸತಿ, ಪುನರ್ ವ್ಯವಸ್ಥೆ ಮತ್ತು ಪರಿಹಾರ ನಿಗದಿ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿರುವ ಭೂ ಸ್ವಾಧೀನ ಕಾಯ್ದೆಯನ್ನು 2013ರಲ್ಲಿ ಜಾರಿಗೊಳಿಸಿತ್ತು.

ಬ್ರಿಟಿಷರ ಆಡಳಿತಾವಧಿಯಲ್ಲಿ (1894ರಲ್ಲಿ) ರೂಪಿಸಿದ್ದ ಭೂ ಸ್ವಾಧೀನ ಕಾಯ್ದೆಯನ್ನು ರದ್ದುಪಡಿಸಿ, ಹೊಸ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೆ ತಂದಿತ್ತು. 

ಆಹಾರ ಭದ್ರತೆ ಕಾಯ್ದೆ

ಸಿಂಗ್‌ ಸರ್ಕಾರವು ಜಾರಿಗೊಳಿಸಿದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ–2013, ದೇಶದಲ್ಲಿ ಕಾರ್ಯಗತಗೊಂಡ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದು. ದೇಶದ ಯಾವೊಬ್ಬ ನಾಗರಿಕನೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿದೆ.

ನಾಗರಿಕ ಆಹಾರ ಭದ್ರತೆ ಕಾಯ್ದೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ, ಪಡಿತರ ವಿತರಣಾ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಕಾಯ್ದೆಯ ಅಡಿಯಲ್ಲಿ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.