
ಬಿಜೆಪಿಯ ರಿತು ತಾವ್ಡೆ,ಪಡಣವೀಸ್, ಏಕನಾಥ್ ಶಿಂದೆ
ಮುಂಬೈ: ಭಾರತದ ಅತ್ಯಂತ ಶ್ರೀಮಂತ ಪಾಲಿಕೆ ಎನಿಸಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗಿ ರಿತು ತಾವ್ಡೆ ಅವಿರೋಧ ಆಯ್ಕೆಯಾದರು. ಈ ಮೂಲಕ ಮುಂಬೈನಲ್ಲಿ ಬಿಜೆಪಿಯ ಮೊದಲ ಮೇಯರ್ ಆಯ್ಕೆಯಾದ ಇತಿಹಾಸ ನಿರ್ಮಾಣವಾಯಿತು.
25 ವರ್ಷಗಳಿಂದ ಮುಂಬೈ ಪಾಲಿಕೆ ಮೇಯರ್ ಸ್ಥಾನ ಅವಿಭಜಿತ ಶಿವಸೇನಾದ ಅಧಿಪತ್ಯದಲ್ಲಿತ್ತು. ಉಪಮೇಯರ್ ಸ್ಥಾನಕ್ಕೆ ಏಕನಾಥ್ ಶಿಂದೆ ಅವರ ಶಿವಸೇನಾದ ಸಂಜಯ್ ಘಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಿತು ತಾವ್ಡೆ ಅವರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಪಾಲಿಕೆಯಲ್ಲಿ ‘ ಜೈ ಶ್ರೀ ರಾಮ್’, ‘ಮೋದಿ..ಮೋದಿ’ ಮತ್ತು ‘ದೇವ್ ಬಾಹು..ದೇವ್ ಬಾಹು’ ಎಂಬ ಜಯಘೋಷಗಳು ಮೊಳಗಿದವು.
1982–83ರಲ್ಲಿ ಪ್ರಭಾಕರ್ ಪೈ ಎಂಬುವರು ಬಿಜೆಪಿಯಿಂದ ಬಾಂಬೆ ನಗರಪಾಲಿಕೆ ಮೇಯರ್ ಆಗಿದ್ದರು. ಇವರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಬಾರ್ಕೂರಿನವರು. ಬೃಹನ್ ಮುಂಬೈ ಪಾಲಿಕೆಯಾಗಿ ಪರಿವರ್ತನೆಯಾದ ನಂತರ ರಿತು ತಾವ್ಡೆ ಅವರು ಬಿಜೆಪಿಯ ಮೊದಲ ಮೇಯರ್ ಎನಿಸಿಕೊಂಡಿದ್ದಾರೆ.
ಬುಧವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಲಿಕೆ ಆಯುಕ್ತ ಹಾಗೂ ಆಡಳಿತಾಧಿಕಾರಿ ಭೂಷಣ್ ಗಗ್ರಾನಿ ಅವರು ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಜರಿದ್ದರು.
227 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 89, ಶಿವಸೇನಾ (ಶಿಂದೆ) 29 ಸ್ಥಾನ, ಎನ್‌ಸಿಪಿ(ಅಜಿತ್) ಮೂರು ಸ್ಥಾನ ಗಳಿಸುವುದರೊಂದಿಗೆ ಮಹಾಯುತಿ ಮೈತ್ರಿಕೂಟ ಸರಳ ಬಹುಮತಕ್ಕೂ (114) ಹೆಚ್ಚು ಸ್ಥಾನ ಪಡೆದಿತ್ತು. ಉದ್ಧವ್ ಠಾಕ್ರೆ ಅವರ ಶಿವಸೇನಾ 65, ರಾಜ್ ಠಾಕ್ರೆ ಅವರ ಎಂಎನ್‌ಎಸ್ 6, ಶರದ್ ಪವಾರ್ ಎನ್‌ಸಿಪಿ ಒಂದು ಸ್ಥಾನ, ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ 24 ಸ್ಥಾನ ಗಳಿಸಿದ್ದವು. ವಿರೋಧ ಪಕ್ಷವಾಗಿರುವ ಶಿವಸೇನಾ(ಉದ್ಧವ್) ಮೇಯರ್ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಿರಲಿಲ್ಲ.
ನಾಲ್ಕು ವರ್ಷದ ನಂತರ ಮೇಯರ್: ನಾಲ್ಕು ವರ್ಷಗಳ ನಂತರ ಬೃಹನ್ ಮುಂಬೈಗೆ ಮೇಯರ್ ಆಯ್ಕೆಯಾಗಿದೆ. 2022ರ ಮಾರ್ಚ್‌ನಲ್ಲಿ ಮೇಯರ್ ಅವಧಿ ಮುಗಿದಿತ್ತು. ಕೋವಿಡ್ ಕಾರಣ, ವಾರ್ಡ್ ಪುನರ್ ರಚನೆ ವಿವಾದ ಹೈಕೋರ್ಟ್, ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀರಿದ್ದ ಮೀಸಲು ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದ ಕಾರಣ ಚುನಾವಣೆ ವಿಳಂಬವಾಗಿತ್ತು. ಆನಂತರ ಯಾವುದೇ ಸಾಮಾನ್ಯ ಸಭೆ ನಡೆದಿರಲಿಲ್ಲ. ಆಯುಕ್ತರನ್ನೇ ಆಡಳಿತಾಧಿಕಾರಿಯಾಗಿ ಸರ್ಕಾರ ನಿಯೋಜನೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.