ADVERTISEMENT

ನಿತೀಶ್ ಬಿಜೆಪಿ ಮೈತ್ರಿ ಕೊನೆಗೊಳಿಸಿದರೆ ಜೆಡಿಯು ಜತೆ ಸೇರಲು ಸಿದ್ಧ: ಆರ್‌ಜೆಡಿ

ಪಿಟಿಐ
Published 8 ಆಗಸ್ಟ್ 2022, 11:34 IST
Last Updated 8 ಆಗಸ್ಟ್ 2022, 11:34 IST
ನಿತೀಶ್ ಕುಮಾರ್ – ಪಿಟಿಐ ಚಿತ್ರ
ನಿತೀಶ್ ಕುಮಾರ್ – ಪಿಟಿಐ ಚಿತ್ರ   

ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡರೆ ಅವರ ಜೆಡಿ(ಯು) ಪಕ್ಷವನ್ನು ಅಪ್ಪಿಕೊಳ್ಳಲು ಸಿದ್ಧ ಎಂದು ಪ್ರತಿಪಕ್ಷ ಆರ್‌ಜೆಡಿ ಸೋಮವಾರ ಹೇಳಿದೆ.

ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿರುವುದು ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ, ಆರ್‌ಜೆಡಿ ಈ ಹೇಳಿಕೆ ನೀಡಿದೆ.

ಎರಡೂ ಪಕ್ಷಗಳು (ಜೆಡಿಯು ಮತ್ತು ಆರ್‌ಜೆಡಿ) ಮಂಗಳವಾರ ಶಾಸಕರ ಸಭೆ ಕರೆದಿರುವುದು ಪರಿಸ್ಥಿತಿಯ ಸ್ಪಷ್ಟ ಸಂದೇಶವಾಗಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದ್ದಾರೆ.

ಕಾಂಗ್ರೆಸ್ ಕೂಡ ಮಂಗಳವಾರ ಶಾಸಕರ ಸಭೆ ಕರೆದಿದೆ ಎಂದೂ ವರದಿಯಾಗಿದೆ.

‘ಏನು ನಡೆಯುತ್ತಿದೆ ಎಂಬುದು ವೈಯಕ್ತಿಕವಾಗಿ ನನಗೆ ತಿಳಿದಿಲ್ಲ. ಆದರೆ, ಉಭಯ ಪಕ್ಷಗಳು ಜತೆಗೂಡಿದರೆ ಸರ್ಕಾರ ರಚನೆಗೆ ಬೇಕಿರುವ ಸಂಖ್ಯಾಬಲ ಇರುವುದನ್ನು ಅಲ್ಲಗಳೆಯುವಂತಿಲ್ಲ. ವಿಧಾನಸಭೆಯ ಅಧಿವೇಶನ ಕೇಂದ್ರೀಕೃತವಲ್ಲದಿದ್ದ ಸಂದರ್ಭದಲ್ಲಿ ಇಂತಹ ಸಭೆಗಳನ್ನು ಕರೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಿತೀಶ್ ಅವರು ಎನ್‌ಡಿಎ ತೊರೆಯಲು ಬಯಸಿದರೆ, ಅವರನ್ನು ಅಪ್ಪಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೇನು ಆಯ್ಕೆ ಇದೆ? ಮುಖ್ಯಮಂತ್ರಿಗಳು ಈ ಹೋರಾಟದಲ್ಲಿ ಭಾಗಿಯಾಗಲು ಬಯಸಿದರೆ ನಾವು ಅವರನ್ನು ಮುಂದಕ್ಕೆ ಕರೆದೊಯ್ಯಲಿದ್ದೇವೆ’ ಎಂದು ತಿವಾರಿ ಹೇಳಿದ್ದಾರೆ.

ಹಿಂದೆ ನಿತೀಶ್ ಜತೆಗಿನ ಮೈತ್ರಿ ಸರ್ಕಾರ ಇದ್ದಾಗ ನಡೆದುದನ್ನು ಮರೆಯಲು ಸಿದ್ಧರಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ನಾವು ಹಿಂದಿನ ಕೈದಿಗಳಾಗಿ ಉಳಿಯಲಾಗದು ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು ಭಾನುವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಬಿಹಾರ ರಾಜಕೀಯಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ, ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಜೆಡಿ(ಯು) ಹಾಗೂ 11 ಗಂಟೆಗೆ ಆರ್‌ಜೆಡಿ ಶಾಸಕರ ಸಭೆ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.