ADVERTISEMENT

ಬಿಹಾರ | ಗುಂಡಿಕ್ಕಿ ಆರ್‌ಜೆಡಿ ಕಾರ್ಯಕರ್ತನ ಹತ್ಯೆ

ಪಿಟಿಐ
Published 11 ಸೆಪ್ಟೆಂಬರ್ 2025, 5:25 IST
Last Updated 11 ಸೆಪ್ಟೆಂಬರ್ 2025, 5:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಪಟ್ನಾದ ರಾಜೇಂದ್ರ ನಗರದ ಟರ್ಮಿನಲ್‌ ಬಳಿ ಆರ್‌ಜೆಡಿ ಕಾರ್ಯಕರ್ತನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ಕಾರ್ಯಕರ್ತನನ್ನು ರಾಜ್ ಕುಮಾರ್ ಅಲಿಯಾಸ್ ಅಲಾ ರಾಯ್ ಎಂದು ಗುರುತಿಸಲಾಗಿದ್ದು, ವೈಶಾಲಿ ಜಿಲ್ಲೆಯ ಮೂಲದವರು.

ಬುಧವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ, ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳು ರಾಜ್‌ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪಟ್ನಾದ ಪೂರ್ವಭಾಗದ ಎಸ್‌ಪಿ ಪರಿಚಯ್ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಸ್ಥಳದಿಂದ ಆರು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ, ಎರಡಕ್ಕಿಂತ ಹೆಚ್ಚು ಮಂದಿ ಸೇರಿ ಈ ಕೃತ್ಯವನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣವನ್ನು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲಾಗಿದೆ ಎಂದು ಎಸ್‌ಪಿ ಕುಮಾರ್ ಮಾಹಿತಿ ನೀಡಿದ್ದಾರೆ.

ರಾಜಕುಮಾರ್‌ ರಾಜಕೀಯದಲ್ಲಿ ಮತ್ತು ಭೂಮಿ ಮಾರಾಟ-ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ಎಂದು ಸ್ಥಳೀಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ವಕ್ತಾರ ಇಜಾಜ್ ಅಹಮದ್‌, ‘ಇದು ಆಘಾತಕಾರಿ ಸುದ್ದಿಯಾಗಿದೆ. ರಾಜ್‌ಕುಮಾರ್‌ ಪಕ್ಷದ ಸಕ್ರಿಯ ಕಾರ್ಯಕರ್ತ. ನಿತೀಶ್ ಕುಮಾರ್ ಸರ್ಕಾರವು ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.