ಪ್ರಾತಿನಿಧಿಕ ಚಿತ್ರ
ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ₹1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆಗೆ, ಕೇಂದ್ರ ಸರ್ಕಾರವು ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಕಳೆದ ವರ್ಷದ ಮಾರ್ಚ್ 14ರಂದು ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ನಂತರ ಆರು ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಈಗ ದೇಶದಾದ್ಯಂತ ವಿಸ್ತರಣೆಗೊಂಡಿದೆ.
ಮೇ 5ರಿಂದಲೇ ರಸ್ತೆ ಅಪಘಾತದಲ್ಲಿ ಸಂತ್ರಸ್ತರಾದವರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬಂದಿದೆ. ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲಿ ಅಪಘಾತ ಸಂಭವಿಸಿದ ದಿನದಿಂದ ಏಳು ದಿನಗಳವರೆಗೆ ಸಂತ್ರಸ್ತರಿಗೆ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.
ಯೋಜನೆ ಜಾರಿಯ ವಿಳಂಬದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಪಘಾತದ ವೇಳೆ ಸಕಾಲದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ದೊರೆಯದಿದ್ದರೆ ಮೃತಪಡುವವರ ಸಂಖ್ಯೆ ಹೆಚ್ಚುತ್ತದೆ. ಇದನ್ನು ತಗ್ಗಿಸುವ ದೃಷ್ಟಿಯಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಈ ಯೋಜನೆ ಅನುಷ್ಠಾನದ ಏಜೆನ್ಸಿಯಾಗಿದೆ. ಪೊಲೀಸರು, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಏಜೆನ್ಸಿಗಳ ಸಹಯೋಗದಡಿ ಯೋಜನೆಯ ಸಮರ್ಪಕ ಅನುಷ್ಠಾನದ ಹೊಣೆ ಹೊತ್ತಿದೆ.
ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಯೋಜನೆಯ ಅನುಷ್ಠಾನದ ನೋಡಲ್ ಏಜೆನ್ಸಿಯಾಗಿ ರಾಜ್ಯ ರಸ್ತೆ ಸುರಕ್ಷಾ ಪರಿಷತ್ ಕಾರ್ಯ ನಿರ್ವಹಿಸಲಿದೆ. ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆ, ಆಸ್ಪತ್ರೆಗಳಿಗೆ ಶುಲ್ಕ ಪಾವತಿ ಇತ್ಯಾದಿ ಬಗ್ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜೊತೆಗೆ ಈ ಪರಿಷತ್ ಕಾರ್ಯ ನಿರ್ವಹಿಸಲಿದೆ.
ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಕೇಂದ್ರವು 11 ಸದಸ್ಯರ ಸಮಿತಿ ರಚಿಸಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ, ಕೇಂದ್ರ ರಸ್ತೆ ಸಾರಿಗೆ ಮತ್ತು ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಸದಸ್ಯರಾಗಿದ್ದಾರೆ.
ಸಚಿವಾಲಯದ ಮಾಹಿತಿ ಪ್ರಕಾರ, 2023ರಲ್ಲಿ ದೇಶದಾದ್ಯಂತ 4.80 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, 1.72 ಲಕ್ಷ ಜನರು ಮೃತಪಟ್ಟಿದ್ದಾರೆ.
ರಸ್ತೆ ಅಪಘಾತದ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮೊದಲು 2024ರ ಮಾರ್ಚ್‌ನಲ್ಲಿ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ನಂತರ ಅದನ್ನು ಆರು ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಈಗ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.