ADVERTISEMENT

ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ: ಐವರು ಪೊಲೀಸ್ ಕಸ್ಟಡಿಗೆ

ಪಿಟಿಐ
Published 5 ಫೆಬ್ರುವರಿ 2026, 13:30 IST
Last Updated 5 ಫೆಬ್ರುವರಿ 2026, 13:30 IST
ರೋಹಿತ್ ಶೆಟ್ಟಿ (ಎಎಫ್‌ಪಿ ಚಿತ್ರ)
ರೋಹಿತ್ ಶೆಟ್ಟಿ (ಎಎಫ್‌ಪಿ ಚಿತ್ರ)   

ಮುಂಬೈ: ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ನಿವಾಸದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಐವರು ಆರೋಪಿಗಳನ್ನು ಫೆಬ್ರುವರಿ 11ರವರೆಗೆ ಪೊಲೀಸ್ ವಶಕ್ಕೆ ನೀಡಿ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

ಆರೋಪಿಗಳಾದ ಆದಿತ್ಯ ಗಯಕಿ (19), ಸಿದ್ದಾರ್ಥ್ ಎನ್ಪುರೆ (20), ಸಮರ್ಥ್ ಪೊಮಾಜಿ (18) ಮತ್ತು ಸ್ವಪ್ನಿಲ್ ಸಕತ್‌ನನ್ನು (23) ಭಾನುವಾರ ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಆಸಾರಾಮ ಫಸಲೆಯನ್ನು ಗುರುವಾರ ಬಂಧಿಸಲಾಗಿದೆ. 

ಆರೋಪಿಗಳಲ್ಲಿ ಒಬ್ಬನಿಂದ ಪಿಸ್ತೂಲ್, ಏರ್‌‌ ಗನ್‌ ಮತ್ತು ಮೂರು ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನಿಗೆ ಆಯುಧವನ್ನು ಗುರುವಾರ ಬಂಧನಕ್ಕೊಳಗಾದ ಫಸಲೆ ಒದಗಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಶುಭಂ ಲೋಂಕರ್ ಸೂಚನೆ ಮೇರೆಗೆ ಆರೋಪಿಗಳು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಶುಭಂ ಈ ಪ್ರಕರಣ ಸೇರಿದಂತೆ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಮತ್ತು ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲೂ ಬೇಕಾಗಿದ್ದಾನೆ.

ಭಾನುವಾರ ರಾತ್ರಿ 12.45ರ ವೇಳೆ ಮುಂಬೈನ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಕನಿಷ್ಠ ಐದು ಸುತ್ತು ಗುಂಡು ಹಾರಿಸಲಾಗಿತ್ತು. ಒಂದು ಗುಂಡು ಕಟ್ಟಡದಲ್ಲಿರುವ ಜಿಮ್‌ನ ಗಾಜಿಗೆ ತಗುಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.