ADVERTISEMENT

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

ಪಿಟಿಐ
Published 13 ಜೂನ್ 2021, 10:10 IST
Last Updated 13 ಜೂನ್ 2021, 10:10 IST
ಸೀತಾರಾಮ್‌ ಯಚೂರಿ
ಸೀತಾರಾಮ್‌ ಯಚೂರಿ    

ನವದೆಹಲಿ: ‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಬೇಕು ಮತ್ತು ಅಗತ್ಯ ಸರಕು ಮತ್ತು ಔಷಧಿಗಳ ಬೆಲೆಯನ್ನು ನಿಯಂತ್ರಿಸಬೇಕು' ಎಂದು ಎಡ ಪಕ್ಷಗಳು ಭಾನುವಾರ ಒತ್ತಾಯಿಸಿವೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಸೇರಿದಂತೆ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್‌, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಷನ್‌ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ಈ ಸಂಬಂಧ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಜನರಿಗೆ ನೆರವಾಗಬೇಕು. ಆದರೆ, ಕೇಂದ್ರವು ಪೆಟ್ರೋಲ್‌ ಉತ್ಪನ್ನಗಳ ಮೇಲಿನ ಬೆಲೆಗಳನ್ನು ಹೆಚ್ಚಿಸುತ್ತಿದೆ. ಮೇ 2ರಂದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ ಸುಮಾರು 21 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಏಪ್ರಿಲ್‌ನಲ್ಲಿ ಆಹಾರ ಪದಾರ್ಥಗಳ ದರ ಶೇಕಡ 5ರಷ್ಟು, ಅಗತ್ಯ ವಸ್ತುಗಳ ಬೆಲೆ ಶೇಕಡ 10.16ರಷ್ಟು ಹೆಚ್ಚಾಗಿದೆ. ಈ ಸರಕುಗಳ ಮೇಲೆ ಚಿಲ್ಲರೆ ವ್ಯಾಪಾರಿಗಳು ಇನ್ನಷ್ಟು ಶುಲ್ಕವನ್ನು ವಿಧಿಸುತ್ತಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಇತ್ತೀಚಿಗೆ ಕಾಳಸಂತೆಗಳ ಹಾವಳಿ ಹೆಚ್ಚಾಗಿದೆ. ಕಾಳಸಂತೆಯಲ್ಲಿ ಅಗತ್ಯ ವಸ್ತುಗಳು, ಔಷಧಿಗಳು ಮಾರಾಟವಾಗದಂತೆಮೋದಿ ಸರ್ಕಾರ ತಡೆಯಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಬಡಕುಟುಂಬಗಳಿಗೆ ಆರು ತಿಂಗಳವರೆಗೆ ಪ್ರತಿ ತಿಂಗಳು ₹7500 ನೀಡಬೇಕು’ ಎಂದು ಎಡಪಕ್ಷಗಳು ಆಗ್ರಹಿಸಿವೆ.

‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್ ಅನ್ನ ಯೋಜನೆಯನ್ನು(ಪಿಎಂಜಿಕೆಎವೈ) ದೀಪಾವಳಿ ತನಕ ವಿಸ್ತರಿಸಲಾಗಿದೆ. ಆದರೆ, 5 ಕೆ.ಜಿ ಆಹಾರ ಧಾನ್ಯಗಳು ಸಾಕಾಗುವುದಿಲ್ಲ. ಇದನ್ನು 10 ಕೆ.ಜಿಗೆ ಹೆಚ್ಚಿಸಬೇಕು’ ಎಂದು ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.