ದೆಹಲಿ ಹೈಕೋರ್ಟ್
ನವದೆಹಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಸಿಜೆಐ ಸಂಜೀವ್ ಖನ್ನಾ ಅವರಿಗೆ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಘಟನೆ ಬಗ್ಗೆ ಸಾಕ್ಷ್ಯ ಹಾಗೂ ಮಾಹಿತಿಯನ್ನು ಸಂಗ್ರಹಿಸಲು ಆಂತರಿಕ ತನಿಖೆ ನಡೆಸಿದ್ದ ನ್ಯಾ.ಉಪಾಧ್ಯಾಯ ಶುಕ್ರವಾರ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆ.
ಮಾರ್ಚ್ 14ರಂದು ಹೋಳಿ ಆಚರಣೆ ವೇಳೆ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ತೆರಳಿದ ಅಗ್ನಿಶಾಮಕ ಅಧಿಕಾರಿಗಳಿಗೆ ₹ 15 ಕೋಟಿ ನಗದು ಇರುವುದು ಪತ್ತೆಯಾಗಿತ್ತು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ಘಟನೆ ಬಗ್ಗೆ ದೆಹಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಆಂತರಿಕ ತನಿಖೆ ನಡೆಸುತ್ತಿದ್ದಾರೆ. ನ್ಯಾ. ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
‘ನ್ಯಾ. ಯಶವಂತ ವರ್ಮಾ ಅವರ ಮನೆಯಲ್ಲಿ ನಡೆದ ಘಟನೆ ಸಂಬಂಧ ಸುಳ್ಳು ಮಾಹಿತಿ ಹಾಗೂ ಊಹಾಪೋಹಗಳನ್ನು ಹರಡಲಾಗುತ್ತಿದೆ’ ಎಂದು ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿತ್ತು.
ಸುಪ್ರೀಂ ಕೋರ್ಟ್‌ನಿಂದ ಆದೇಶ ಬರುತ್ತಿದ್ದಂತೆಯೇ ನ್ಯಾ. ಉಪಾಧ್ಯಾಯ ತನಿಖೆ ಆರಂಭಿಸಿದ್ದು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಮಾರ್ಚ್ 20ರ ಕೊಲಿಜಿಯಂನ ಸಭೆಗೂ ಮುನ್ನ ತನಿಖೆ ಆರಂಭವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.