ADVERTISEMENT

ಕ್ಷಮೆಯಾಚಿಸದ ಸಂಸದರ ನಡೆಯು ಅವರ ವರ್ತನೆಯನ್ನು ಸಮರ್ಥಿಸುತ್ತದೆ: ವೆಂಕಯ್ಯ ನಾಯ್ಡು

ಐಎಎನ್ಎಸ್
Published 30 ನವೆಂಬರ್ 2021, 8:29 IST
Last Updated 30 ನವೆಂಬರ್ 2021, 8:29 IST
ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು
ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು   

ನವದೆಹಲಿ: ಕಳೆದ ಅಧಿವೇಶನದಲ್ಲಿ ಅನುಚಿತ, ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮಾಡಲಾದ ರಾಜ್ಯಸಭೆಯ ಪ್ರತಿಪಕ್ಷಗಳ 12 ಸದಸ್ಯರ ಅಮಾನತು ರದ್ದುಗೊಳಿಸುವಂತೆ ಕೋರಿದ್ದ ಪ್ರತಿಪಕ್ಷಗಳ ಮನವಿಯನ್ನು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮಂಗಳವಾರ ತಿರಸ್ಕರಿಸಿದ್ದಾರೆ.

'ಸದ್ಯ ಅಮಾನತುಗೊಂಡಿರುವ ಸಂಸದರು ಕ್ಷಮೆ ಯಾಚಿಸಿಲ್ಲ. ಇದು ಅವರ ವರ್ತನೆಯನ್ನು ಸಮರ್ಥಿಸುತ್ತದೆ. ಹೀಗಾಗಿಯೇ 12 ಸಂಸದರ ಅಮಾನತು ಹಿಂಪಡೆಯುವಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ' ಎಂದು ಅವರು ಹೇಳಿದರು.

ಈ ವೇಳೆ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.

ADVERTISEMENT

256 ನೇ ನಿಯಮದಡಿ ವಿಷಯ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಅಮಾನತುಗೊಳಿಸಿರುವುದು ನಿಯಮಾವಳಿಗಳ ಕಾರ್ಯವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.

'ಕಳೆದ ಅಧಿವೇಶನದ ಸಮಯದಲ್ಲಿ ಅಶಿಸ್ತು ತೋರಿದ್ದಕ್ಕೆ ಈಗ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಇದು ಸದನದ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಅವರೀಗ ಕ್ಷಮೆಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಖರ್ಗೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, 'ಘಟನೆ ನಡೆದ ದಿನದಂದೇ ಸದನವು ನಿಲುವಳಿಯನ್ನು ಅಂಗೀಕರಿಸಿದೆ ಮತ್ತು ಸಭಾಪತಿಯವರು ಅಂತಹ ಸಂಸದರ ಹೆಸರನ್ನು ಹೇಳಲಾಗಿದೆ' ಎಂದು ಹೇಳಿದರು.

ಮಂಗಳವಾರ ಮುಂಜಾನೆಯಷ್ಟೇ, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಅಮಾನತು ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದೀಗ ಪ್ರತಿಪಕ್ಷಗಳಿಗೆ ಹಿನ್ನಡೆ ಉಂಟಾಗಿದೆ.

ತಮ್ಮ ನಡೆಯನ್ನು ಸಮರ್ಥಿಸುತ್ತಾ ಟಿಎಂಸಿಯ ಡೆರೆಕ್ ಒಬ್ರಿಯಾನ್, 'ಪದೇ ಪದೆ ಮನವಿ ಮಾಡಿದರೂ ಕೆಲವು ವಿಚಾರಗಳನ್ನು ಚರ್ಚೆಗೆ ತರದ ಕಾರಣ ಮುಂಗಾರು ಅಧಿವೇಶನದಲ್ಲಿ ಸದಸ್ಯರು ಇಂತಹ ನಡವಳಿಕೆಯನ್ನು ಆಶ್ರಯಿಸಬೇಕಾಯಿತು. ಪ್ರತಿಪಕ್ಷದ 12 ಸಂಸದರನ್ನಲ್ಲ, ಸದನದ 80 ಸಂಸದರನ್ನು ಅಮಾನತುಗೊಳಿಸಬೇಕು' ಎಂದು ಅವರು ಪ್ರತಿಪಾದಿಸಿದರು.

ಕಳೆದ ಅಧಿವೇಶನದಲ್ಲಿ ಅನುಚಿತ, ಅಶಿಸ್ತಿನ ವರ್ತನೆ ತೋರಿಸಿದ್ದಕ್ಕಾಗಿ ಪ್ರತಿಪಕ್ಷ ಸದಸ್ಯರನ್ನು ಸೋಮವಾರ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಅಮಾನತುಗೊಂಡವರಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ ಮತ್ತು ಶಿವಸೇನಾ ಸಂಸದರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.