ನವದೆಹಲಿ: ಪಾಕಿಸ್ತಾನಕ್ಕೆ ಆಯುಧ ಹಾಗೂ ಡ್ರೋನ್‌ಗಳನ್ನು ರಪ್ತು ಮಾಡುವ ಮೂಲಕ, ಅವರ ಪರ ನಿಂತು ಭಾರತದ ಸುರಕ್ಷತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಟರ್ಕಿಯ ವಿರುದ್ಧ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್(ಎಸ್‌ಜೆಎಮ್), ಬುಧವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಟರ್ಕಿಯ ವಿರುದ್ಧ ಹಣಕಾಸು ನಿರ್ಬಂಧ, ನಾಗರಿಕ ವಿಮಾನಯಾನ ಸೇವೆ ಮತ್ತು ಪ್ರವಾಸವನ್ನು ರದ್ದು ಮಾಡುವುದು ಹಾಗೂ ಈಗಿರುವ ರಾಜತಾಂತ್ರಿಕ ಸಂಬಂಧದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ.
ಭಾರತೀಯರು ಟರ್ಕಿಗೆ ಪ್ರವಾಸಕ್ಕೆ ತೆರಳುವುದನ್ನು ನಿಲ್ಲಿಸಬೇಕು ಹಾಗೂ ಅವರ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿದೆ.
ಚೀನಾ ನಂತರದಲ್ಲಿ, ಪಾಕಿಸ್ತಾನಕ್ಕೆ ಅತಿ ಹೆಚ್ಚಿನ ಪ್ರಮಾಣ ಆಯುಧಗಳನ್ನು ಟರ್ಕಿ ರಪ್ತು ಮಾಡುತ್ತಿದೆ. ಇದರಿಂದ ಪಾಕಿಸ್ತಾನದ ವಾಯುಪಡೆ ಹಾಗು ನೌಕಾಪಡೆಯು ಆಧುನಿಕಗೊಂಡಿದೆ. ಟರ್ಕಿಯು ಕೇವಲ ವ್ಯಾಪಾರದ ದೃಷ್ಟಿಯಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿಲ್ಲ. ಬದಲಾಗಿ, ಇದರ ಹಿಂದೆ ಬೇರೆಯ ಉದ್ದೇಶವಿದೆ ಎಂದು ಆರೋಪಿಸಿತು.
ಭಾರತವು ಟರ್ಕಿಗೆ ನಿರ್ಬಂಧವನ್ನು ಹೇರಿದರೆ, ಪಾಕಿಸ್ತಾನಕ್ಕೆ ಅವರಿಂದ ರಫ್ತಾಗುತ್ತಿರುವ ಆಯುಧ ಸರಬರಾಜನ್ನು ನಿಲ್ಲಿಸಬಹುದು ಎಂದು ಎಸ್‌ಜೆಎಮ್ ವಕ್ತಾರ ಅಶ್ವಿನಿ ಮಹಾಜನ್ ಹೇಳಿದರು.
2023ರಲ್ಲಿ ಟರ್ಕಿಯಲ್ಲಿ ಭಯಂಕರ ಭೂಕಂಪವಾದಾಗ, ಭಾರತವು ಮಾನವೀಯ ನೆಲೆಯಲ್ಲಿ ಅವರಿಗೆ ಸಹಾಯಹಸ್ತ ಚಾಚಿತ್ತು.
ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ವೇಳೆ, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್‌ಗಳ ಮೂಲಕ ಭಾರತೀಯ ಸೇನಾ ನೆಲಗಳ ಮೇಲೆ ದಾಳಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.