ADVERTISEMENT

ಕೇರಳ: ಮಹಾತ್ಮ ಗಾಂಧಿ ಮರಿಮೊಮ್ಮಗನ ಕಾರು ತಡೆದು ಘೋಷಣೆ ಕೂಗಿದ RSS ಕಾರ್ಯಕರ್ತರು

ಪಿಟಿಐ
Published 13 ಮಾರ್ಚ್ 2025, 10:52 IST
Last Updated 13 ಮಾರ್ಚ್ 2025, 10:52 IST
<div class="paragraphs"><p>ತುಷಾರ್ ಗಾಂಧಿ</p></div>

ತುಷಾರ್ ಗಾಂಧಿ

   

- ಪಿಟಿಐ ಚಿತ್ರ

ತಿರುವನಂತಪುರ: ಆರ್‌ಎಸ್ಎಸ್‌ ವಿರುದ್ಧ ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ADVERTISEMENT

ಬುಧವಾರ ನೈಯಾಟಿಂಕರ ಎನ್ನುವಲ್ಲಿ ತುಷಾರ್ ಗಾಂಧಿ ಭಾಗಿಯಾಗಿದ್ದ ಕಾರ್ಯಕ್ರಮ ಮುಗಿದ ಬಳಿಕ ಸಂಘಪರಿವಾರದೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ವ್ಯಕ್ತಿಗಳ ಸಣ್ಣ ಗುಂಪೊಂದು ಘೋಷಣೆ ಕೂಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗುವ ದೃಶ್ಯಗಳನ್ನು ಟಿ.ವಿ ಮಾಧ್ಯಮಗಳು ಪ್ರಸಾರ ಮಾಡಿವೆ.

ಗಾಂಧಿವಾದಿ ದಿವಂಗತ ಪಿ, ಗೋಪಿನಾಥ್ ನಾಯರ್ ಅವರ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುಷಾರ್ ಗಾಂಧಿ ನೈಯಾಂಟಿಕರಕ್ಕೆ ಬಂದಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ರಾಜ್ಯದಲ್ಲಿ ಯುಡಿಎಫ್‌ ಹಾಗೂ ಎಲ್‌ಡಿಎಫ್ ಪಕ್ಷಗಳ ಸಂಘರ್ಷಕ್ಕೆ ದೀರ್ಘ ಇತಿಹಾಸ ಇದೆ. ಎರಡೂ ಪಕ್ಷಗಳು, ಕೇರಳಕ್ಕೆ ಮತ್ತೊಂದು ಅತ್ಯಂತ ಅಪಾಯಕಾರಿ ಮತ್ತು ಕಪಟ ಶತ್ರು - ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರವೇಶಿಸಿದೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದ್ದರು.

‘ಬಿಜೆಪಿಯನ್ನು ನಾವು ಸೋಲಿಸಬಹುದು. ಆದರೆ ಆರ್‌ಎಸ್‌ಎಸ್ ವಿಷ. ಅದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಅದು ನಮ್ಮ ದೇಶದ ವ್ಯವಸ್ಥೆಯಲ್ಲಿ ಹರಡಿದರೆ ಎಲ್ಲವೂ ನಾಶವಾಗುತ್ತದೆ’ ಎಂದು ಹೇಳಿದ್ದರು.

ಬ್ರಿಟಿಷರಿಗಿಂತ ಆರ್‌ಎಸ್‌ಎಸ್‌ ಅಪಾಯಕಾರಿ. ಅವರು ದೇಶದ ಆತ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಅದರ ಬಗ್ಗೆ ಎಚ್ಚರದಿಂದ ಇರಬೇಕು. ಏಕೆಂದರೆ ಆತ್ಮ ಕಳೆದುಹೋದರೆ, ಎಲ್ಲವೂ ಕಳೆದುಹೋಗುತ್ತದೆ. ವಿಭಜಕ ಶಕ್ತಿಗಳ ವಿರುದ್ಧ ನಾವು ಒಂದಾಗಿರಬೇಕು’ ಎಂದಿದ್ದರು

ಸಂಘ ಪರಿವಾರದ ಕಾರ್ತಕರ್ತರು ತುಷಾರ್ ಗಾಂಧಿ ಅವರ ಕಾರು ತಡೆದು, ಘೋಷಣೆಗ ಕೂಗಿ ಪ್ರತಿಭಟಿಸಿದರು. ಈ ಪುರಸಭೆ ವಾರ್ಡ್‌ ಅನ್ನು ಬಿಜೆಪಿ ಸದಸ್ಯ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್‌ ವಿರುದ್ಧದ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಹೇಳಿಕೆ ಹಿಂಪಡೆಯಲು ನಿರಾಕರಿಸಿದ ತುಷಾರ್ ಗಾಂಧಿ, ‘ಗಾಂಧೀಜಿ ಕಿ ಜೈ’ ಎಂದು ಘೋಷಣೆ ಕೂಗಿ ಸ್ಥಳದಿಂದ ತೆರಳಿದರು.

ಈ ಬಗ್ಗೆ ಬಳಿಕ ಹೇಳಿಕೆ ನೀಡಿದ ಅವರು, ‘ನನ್ನ ಮೇಲೆ ದೈಹಿಕ ಹಲ್ಲೆ ನಡೆದಿಲ್ಲ. ಹೀಗಾಗಿ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ತುಷಾರ್ ಗಾಂಧಿ ಬೆನ್ನಿಗೆ ಕಾಂಗ್ರೆಸ್ ನಿಂತಿದ್ದು, ಸಂಘಪರಿವಾರ ಮಹಾತ್ಮ ಗಾಂಧಿಗೆ ಅವಮಾನಿಸಿದೆ ಎಂದು ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.