ADVERTISEMENT

ಒಂದು ದೇಗುಲ, ಒಂದು ಬಾವಿ, ಒಂದು ಸ್ಮಶಾನ ತತ್ವ ಪಾಲಿಸಿ: ಹಿಂದೂಗಳಿಗೆ ಭಾಗವತ್‌ ಕರೆ

ಪಿಟಿಐ
Published 20 ಏಪ್ರಿಲ್ 2025, 13:05 IST
Last Updated 20 ಏಪ್ರಿಲ್ 2025, 13:05 IST
<div class="paragraphs"><p>ಮೋಹನ್‌ ಭಾಗವತ್‌</p></div>

ಮೋಹನ್‌ ಭಾಗವತ್‌

   

– ಪಿಟಿಐ ಚಿತ್ರ

ಅಲಿಘಡ (ಉತ್ತರ ಪ್ರದೇಶ): ‌ಜಾತಿಗಳ ನಡುವಿನ ಭೇದವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್, ‘ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ' ಎಂಬ ತತ್ವ ಅನುಸರಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಹಿಂದೂಗಳು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ADVERTISEMENT

ಅಲೀಗಢಕ್ಕೆ 5 ದಿನಗಳ ಪ್ರವಾಸ ಕೈಗೊಂಡಿರುವ ಅವರು, ಎಚ್‌.ಬಿ ಇಂಟರ್‌ ಕಾಲೇಜು ಹಾಗೂ ಪಂಚನ್‌ ನಗರಿ ಪಾರ್ಕ್‌ನಲ್ಲಿ ಸಂಘಟನೆಯ ಎರಡು ಶಾಖೆಗಳ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.

‘ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ ಎಂಬ ತತ್ವವನ್ನು ಪಾಲಿಸಿದಾಗ ಮಾತ್ರ ನಮ್ಮಲ್ಲಿನ ಭೇದ ಹಾಗೂ ತಾರತಮ್ಯ ಅಳಿಯುತ್ತದೆ. ಇದು ಸಮಾಜದ ಎಲ್ಲ ವರ್ಗಗಳ ನಡುವೆ ಏಕತೆ ಮೂಡಿಸಲು ನೆರವಾಗುತ್ತದೆ’ ಎಂದು ಭಾಗವತ್‌ ಹೇಳಿದ್ದಾರೆ.

‘ಕುಟುಂಬ ನಿರ್ವಹಣೆ, ಸಾಮಾಜಿಕ ಸೌಹಾರ್ದ, ಪರಿಸರ ಸಂರಕ್ಷಣೆ, ಸ್ವಯಂ ಅರಿವು ಹಾಗೂ ನಾಗರಿಕ ಕರ್ತವ್ಯ ಪಾಲನೆ ಎಂಬ ಐದು ‘ಪರಿವರ್ತನೆ’(ಬದಲಾವಣೆ)ಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಭಾರಿ ಬದಲಾವಣೆ ಸಾಧ್ಯ’ ಎಂದೂ ಹೇಳಿದ್ದಾರೆ.

‘ಸಂಘಟನೆಯ ಶತಮಾನೋತ್ಸವ ವರ್ಷದ ಅಂಗವಾಗಿ ಈ ವಿಚಾರಗಳನ್ನು ಸಾಮಾಜಿಕ ಆಂದೋಲನವಾಗಿ ಆರ್‌ಎಸ್‌ಎಸ್‌ ಆರಂಭಿಸಲಿದೆ. ಈ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವುದಕ್ಕಾಗಿ ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ’ ಎಂದು ಹೇಳಿದ ಭಾಗವತ್, ‘ಮೌಲ್ಯಗಳೇ ಭಾರತೀಯ ಸಮಾಜದ ಬಹು ದೊಡ್ಡ ಆಸ್ತಿ’ ಎಂದು ವಿವರಿಸಿದ್ದಾರೆ.

‘ಸಂಸ್ಕಾರವೇ ಹಿಂದೂ ಸಮಾಜದ ತಳಪಾಯ. ಹೀಗಾಗಿ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕ ತತ್ವಗಳೇ ಆಧಾರವಾಗಿರುವಂತಹ ಸಮಾಜ ನಿರ್ಮಾಣಕ್ಕೆ ಹಿಂದೂಗಳು ಶ್ರಮಿಸಬೇಕು’ ಎಂದು ಹೇಳಿದ್ದಾರೆ.

ಬರುವ ವಿಜಯದಶಮಿಯಂದು ಆರ್‌ಎಸ್‌ಎಸ್‌ನ ಶತಮಾನೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಇದಕ್ಕಾಗಿ ಸಂಘಟನೆ ಕೈಗೊಂಡಿರುವ ಸಿದ್ಧತೆ ಭಾಗವಾಗಿ ಭಾಗವತ್‌ ಅವರು ಆರ್‌ಎಸ್‌ಎಸ್‌ ಪ್ರಚಾರಕರೊಂದಿಗೆ ಸಭೆ ನಡೆಸಲಿದ್ದಾರೆ. ಬ್ರಜ್‌ ಪ್ರದೇಶಕ್ಕೆ ಸೇರಿರುವ ಅಲೀಗಢದಿಂದ ಇಂತಹ ಸಭೆಗಳಿಗೆ ಅವರು ಏಪ್ರಿಲ್‌ 17ರಂದು ಚಾಲನೆ ನೀಡಿದ್ದಾರೆ.

ಸ್ವಯಂಸೇವಕರು ಸಮಾಜದ ಎಲ್ಲ ವರ್ಗಗಳನ್ನು ಬೆಸೆಯಬೇಕು. ಎಲ್ಲರನ್ನು ತಮ್ಮ ಮನೆಗಳಿಗೆ ಆಹ್ವಾನಿಸುವ ಮೂಲಕ ಸೌಹಾರ್ದ ಮತ್ತು ಏಕತೆಯ ಸಂದೇಶ ರವಾನಿಸಬೇಕು
ಮೋಹನ ಭಾಗವತ್ ಆರ್‌ಎಸ್‌ಎಸ್‌ ಮುಖ್ಯಸ್ಥ

ಭಾಗವತ್‌ ಭಾಷಣದ ಪ್ರಮುಖ ಅಂಶಗಳು

  • ಕುಟುಂಬವೇ ಸಮಾಜದ ಮೂಲಭೂತ ಘಟಕ. ಸಂಸ್ಕಾರದಿಂದ ಹೊಮ್ಮಿದ ದೃಢವಾದ ಮೌಲ್ಯಗಳು ಕುಟುಂಬದ ಆಧಾರವಾಗಿರಬೇಕು

  • ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸಬೇಕು. ಇದರಿಂದ ರಾಷ್ಟ್ರೀಯತೆ ಮತ್ತು ಸಾಮಾಜಿಕ ಒಗ್ಗಟ್ಟು ಮತ್ತಷ್ಟು ಗಟ್ಟಿಗೊಳ್ಳುತ್ತದೆ

  • ‘ಆದರ್ಶ ಹಿಂದೂ ಕುಟುಂಬ’ ಪರಿಕಲ್ಪನೆ ಸಾಕಾರಗೊಳಿಸುವುದಕ್ಕಾಗಿ ಕಾಲೇಜುಗಳಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳುವುದು ಮಹಿಳೆಯೊಂದಿಗೆ ಸಭೆ ನಡೆಸುವುದು ಹಾಗೂ ‘ಮಾತಾ–ಪಿತ ಪೂಜೆ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.