ADVERTISEMENT

ಮುಸ್ಲಿಮರು ಇಲ್ಲಿರಕೂಡದು ಎನ್ನುವವರು ಹಿಂದೂಗಳೇ ಅಲ್ಲ: ಮೋಹನ್‌ ಭಾಗವತ್‍‌

ಪಿಟಿಐ
Published 4 ಜುಲೈ 2021, 15:38 IST
Last Updated 4 ಜುಲೈ 2021, 15:38 IST
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಸಾಂದರ್ಭಿಕ ಚಿತ್ರ
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಸಾಂದರ್ಭಿಕ ಚಿತ್ರ   

ಘಾಜಿಯಾಬಾದ್‌: ಮುಸ್ಲಿಮರು ಇಲ್ಲಿ ಇರಕೂಡದು ಎಂದು ಯಾರಾದರು ಹೇಳಿದರೆ ಅಂತಹ ವ್ಯಕ್ತಿ ಹಿಂದೂವೇ ಅಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ನಡುವಣ ಉತ್ತಮ ಬಾಂಧವ್ಯಕ್ಕೆ ಪ್ರಬಲ ಸಂದೇಶ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಒಬ್ಬರ ಮೇಲೊಬ್ಬರು ಪ್ರಾಬಲ್ಯ ಸಾಧಿಸುವಂತಿರಬಾರದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಭಾನುವಾರ ಘಾಜಿಯಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹನ್‌ ಭಾಗವತ್‌, ಗೋವು ಪವಿತ್ರವಾದ ಪ್ರಾಣಿ. ಆದರೆ ಬೇರೆಯವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿರುವವರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಅಂತಹವರ ವಿರುದ್ಧ ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಖೆಡ್ಡಕ್ಕೆ ಯಾರೂ ಬೀಳಬಾರದು. ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಆಗಿದ್ದರು ಎಂಬ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು. ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಭಾಗವತ್‌ ಪ್ರತಿಪಾಧಿಸಿದ್ದಾರೆ.

ಭಾಷಣ ಆರಂಭಿಸುವ ಮೊದಲೇ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರ ಹಿಂದೆ ವರ್ಚಸ್ಸು ವೃದ್ಧಿ ಅಥವಾ ವೋಟ್‌ಬ್ಯಾಂಕ್‌ ರಾಜಕೀಯದ ಉದ್ದೇಶಗಳಿಲ್ಲ ಎಂಬುದನ್ನು ಭಾಗವತ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.