ಮಹಾಯುತಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿರುವ ಬಿಜೆಪಿಯ ದೇವೇಂದ್ರ ಫಡಣವೀಸ್, ಎನ್‌ಸಿಪಿಯ ಅಜಿತ್ ಪವಾರ್
–ಸಂಗ್ರಹ ಚಿತ್ರ: ಪಿಟಿಐ
ಮುಂಬೈ: ‘ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆಗೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಕೈಜೋಡಿಸಿದ್ದೇ ಕಾರಣ’ ಎಂದು ಆರ್‌ಎಸ್‌ಎಸ್ ಜೊತೆಗೆ ಗುರುತಿಸಿಕೊಂಡಿರುವ ಮರಾಠಿ ವಾರಪತ್ರಿಕೆ ‘ವಿವೇಕ’ ವಿಶ್ಲೇಷಿಸಿದೆ.
ಉತ್ತಮ ಹೊಂದಾಣಿಕೆ ಹಾಗೂ ನೀತಿ-ನಿರ್ಧಾರಗಳಲ್ಲಿ ಪಕ್ಷದ ಕಾರ್ಯಕರ್ತರ ಮಾತುಗಳಿಗೆ ಪ್ರಾಮುಖ್ಯ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿ ಜಯಭೇರಿ ಬಾರಿಸುವುದು ಸಾಧ್ಯವಾಯಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯ ಬಲ ರಾಜ್ಯದಲ್ಲಿ23 ರಿಂದ 9ಕ್ಕೆ ಕುಸಿದಿದ್ದರೆ; ಕಾಂಗ್ರೆಸ್, ಶಿವಸೇನೆ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಪಕ್ಷಗಳಿದ್ದ ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟವು ಒಟ್ಟು 48 ಕ್ಷೇತ್ರಗಳಲ್ಲಿ 30ರಲ್ಲಿ ಜಯಗಳಿಸಿತು ಎಂದು ವಿವರಿಸಿದೆ.
‘ವಿವೇಕ’ ವಾರಪತ್ರಿಕೆಯ ಈಚಿನ ಸಂಚಿಕೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕುರಿತು ಸಮೀಕ್ಷೆಯೊಂದನ್ನು ಪ್ರಕಟಿಸಿದೆ. ಸಮೀಕ್ಷೆಗಾಗಿ ಮುಂಬೈ, ಕೊಂಕಣ, ಪಶ್ಚಿಮ ಮಹಾರಾಷ್ಟ್ರದಲ್ಲಿ 200ಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಿದ್ದಾಗಿ ಉಲ್ಲೇಖಿಸಿದೆ.
ಬಿಜೆಪಿ ಅಥವಾ ಸಂಘಟನೆಗಳ (ಸಂಘ ಪರಿವಾರ) ಜೊತೆಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರೂ ಬಹುತೇಕ ಬಿಜೆಪಿ–ಎನ್‌ಸಿಪಿಯಿಂದ ಹಿನ್ನಡೆಯಾಯಿತು ಎಂದು ಅಭಿಪ್ರಾಯ ದಾಖಲಿಸಿದರು ಎಂದು ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ.
‘ಉದ್ಯಮಿಗಳು, ವ್ಯಾಪಾರಿಗಳು, ವೈದ್ಯರು, ಪ್ರೊಫೆಸರ್‌ಗಳು, ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಿದೆವು. ಬಿಜೆಪಿ ಮತ್ತು ಶಿವಸೇನೆ ನಡುವೆ ಹಿಂದುತ್ವದ ಕೊಂಡಿ ಇರುವ ಕಾರಣ, ಪರಸ್ಪರ ಸಣ್ಣ–ಪುಟ್ಟ ದೂರುಗಳಿದ್ದರೂ ಯಾವಾಗಲೂ ಉತ್ತಮ ಫಲಿತಾಂಶ ನೀಡಿದೆ. ಉದ್ಧವ್ ಠಾಕ್ರೆ ವಿರುದ್ಧದ ಏಕನಾಥ ಶಿಂದೆ ಬಂಡಾಯವನ್ನು ಜನರೂ ಸ್ವೀಕರಿಸಿದ್ದರು’ ಎಂದು ತಿಳಿಸಿದೆ.
ಬಿಜೆಪಿಯು ಅಜಿತ್ ನೇತೃತ್ವದ ಎನ್‌ಸಿಪಿ ಜೊತೆಗೆ ಬಿಜೆಪಿ ಜೊತೆ ಕೈಜೋಡಿಸಿದ್ದು, ಜನರ ಭಾವನೆಗೆ ವಿರುದ್ಧವಾಗಿತ್ತು. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಮುಖಂಡರನ್ನು ಕಡೆಗಣಿಸಿ ಇತರೆ ಪಕ್ಷಗಳ ಮುಖಂಡರಿಗೆ ಬಿಜೆಪಿ ಆದ್ಯತೆ ನೀಡುತ್ತಿದೆ ಎಂಬ ಭಾವನೆ ದಟ್ಟವಾಯಿತು. ಇದೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತು ಎಂದು ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.