ನವದೆಹಲಿ: ‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂಬ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಜರ್’ ಶುಕ್ರವಾರ ಸಮರ್ಥಿಸಿಕೊಂಡಿದೆ.
‘ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ಉದ್ದೇಶವಿಲ್ಲ. ಸಂವಿಧಾನದ ‘ಮೂಲ ಆಶಯ’ ಮರುಸ್ಥಾಪಿಸಬೇಕು ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ನೀತಿಯ ಭಾಗವಾಗಿ ಮಾಡಿದ್ದ ‘ವಿರೂಪ’ಗಳಿಂದ ಸಂವಿಧಾನ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಈ ಮಾತು ಹೇಳಿದ್ದಾರೆ’ ಎಂದು ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಹೇಳಲಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಅಂಶಗಳನ್ನು ಉಲ್ಲೇಖಿಸಿರುವ ಪತ್ರಿಕೆ, ‘ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿರುವ ಪ್ರಜಾತಾಂತ್ರಿಕ ತತ್ವಗಳನ್ನು ಹೊಸಬಾಳೆ ಅವರ ಮಾತುಗಳು ಪ್ರತಿಧ್ವನಿಸುತ್ತವೆ’ ಎಂದಿದೆ.
‘ಭಾರತವನ್ನು ‘ಜಾತ್ಯತೀತ ಹಾಗೂ ಸಮಾಜವಾದಿ ರಾಜ್ಯಗಳ ಒಕ್ಕೂಟ’ವೆಂದು ಘೋಷಿಸಬೇಕು ಎಂಬ ಪ್ರಸ್ತಾವವನ್ನು ಸಂವಿಧಾನ ರಚನಾ ಸಭೆ 1948ರಲ್ಲಿ ತಿರಸ್ಕರಿಸಿತ್ತು’ ಎಂದು ಲೇಖನದಲ್ಲಿ ವಿವರಿಸಲಾಗಿದೆ.
‘ಕಾಂಗ್ರೆಸ್ ಸರ್ಕಾರ ತಂದ 42ನೇ ತಿದ್ದುಪಡಿ ರಾಜಕೀಯ ತಂತ್ರಗಾರಿಕೆಯಾಗಿತ್ತೇ ಹೊರತು, ಸಂವಿಧಾನ ರಚನಾ ಸಭೆಯ ಆಶಯವಾಗಿರಲಿಲ್ಲ. ಭಾರತದ ಭವಿಷ್ಯದ ಪೀಳಿಗೆಗಳನ್ನು ಸಶಕ್ತಗೊಳಿಸಬಲ್ಲ ಪ್ರಜಾಸತ್ತಾತ್ಮಕ ಚೌಕಟ್ಟು ಕುರಿತು ಅಂಬೇಡ್ಕರ್ ಹೊಂದಿದ್ದ ದೂರದೃಷ್ಟಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎಂಬುದು ಹೊಸಬಾಳೆ ಅವರ ಉದ್ದೇಶವಾಗಿದೆ. ಈ ವಿಚಾರವಾಗಿ ಮುಕ್ತ ಮಾತುಕತೆ ಬಯಸಿ, ಅವರು ಈ ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದೆ.
ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ: ರಾಹುಲ್
‘ಸಂಘಟನೆಯ ಸರಕಾರ್ಯವಾಹ ದತ್ತಾತ್ತೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ. ಸಂವಿಧಾನದ ಬದಲು ಮನುಸ್ಮೃತಿ ಜಾರಿಗೊಳ್ಳಬೇಕು ಎಂಬುದೇ ಅದರ ಬಯಕೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ಸಮಾನತೆ, ಜಾತ್ಯತೀತತೆ ಹಾಗೂ ನ್ಯಾಯದ ಪರವಾಗಿ ಮಾತನಾಡುವ ಸಂವಿಧಾನವು ಆರ್‌ಎಸ್‌ಎಸ್‌ಅನ್ನು ಕೆರಳುವಂತೆ ಮಾಡುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸಂವಿಧಾನದ ಬದಲು ಮನುಸ್ಕೃತಿ ಜಾರಿಗೊಳಿಸುವ ಕುರಿತು ಕನಸು ಕಾಣುವುದನ್ನು ಆರ್‌ಎಸ್‌ಎಸ್ ನಿಲ್ಲಿಸಬೇಕು. ಅದು ಕಾರ್ಯಗತವಾಗುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ದೇಶಪ್ರೇಮಿಯಾಗಿರುವ ಪ್ರತಿಯೊಬ್ಬ ಭಾರತೀಯ ತನ್ನ ಕೊನೆಯ ಉಸಿರಿನವರೆಗೂ ಸಂವಿಧಾನ ರಕ್ಷಣೆಗೆ ಹೋರಾಡುತ್ತಾನೆ’ ಎಂದೂ ಅವರು ಹೇಳಿದ್ದಾರೆ.
ನಾಗ್ಪುರದಲ್ಲಿ (ಆರ್‌ಎಸ್‌ಎಸ್ ಕೇಂದ್ರ ಕಚೇರಿ) ಮುದ್ರಿತವಾದದ್ದು ಕಾರ್ಯರೂಪಕ್ಕೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ, ನೀವು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದಬೇಕು. ಸಮಾಜವಾದ ಮತ್ತು ಜಾತ್ಯತೀತ ಮೌಲ್ಯಗಳು ಸಂವಿಧಾನದ ಅವಿಭಾಜ್ಯ ಭಾಗಗಳೇ ಆಗಿವೆ. ಬಹುಶಃ ಈ ಬಗ್ಗೆ ಅವರು ಓದಿಲ್ಲ.ಮನೋಜ್‌ಕುಮಾರ್ ಝಾ, ಆರ್‌ಜೆಡಿ ಸಂಸದ
ಸಂವಿಧಾನವನ್ನು ಬುಡಮೇಲು ಮಾಡಬೇಕು ಹಾಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಆರ್‌ಎಸ್‌ಎಸ್‌ನ ಬಹುದಿನದ ಗುರಿ. ದತ್ತಾತ್ತೇಯ ಹೊಸಬಾಳೆ ಅವರ ಹೇಳಿಕೆ ಈ ಪಿತೂರಿಯನ್ನು ಬಹಿರಂಗಪಡಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್ ಈಗ ಸಂವಿಧಾನದಲ್ಲಿನ ಮೂಲಭೂತ ತತ್ವಗಳನ್ನು ತೆಗೆದುಹಾಕಲು ಸಲಹೆ ನೀಡುತ್ತಿದೆ.ಸಿಪಿಎಂ ಪಾಲಿಟ್ ಬ್ಯುರೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.