ADVERTISEMENT

ಗೋಕರ್ಣದ ಗುಹೆಯಲ್ಲಿ ಮಕ್ಕಳ ಸಹಿತ ಪತ್ತೆಯಾಗಿದ್ದ ರಷ್ಯಾ ಮಹಿಳೆಯ ಪತಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2025, 16:19 IST
Last Updated 16 ಜುಲೈ 2025, 16:19 IST
   

ಪಣಜಿ: ಗುಹೆಯೊಂದರಲ್ಲಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಪತ್ತೆಯಾಗಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪತಿ ಡಾರ್ ಗೋಲ್ಡ್‌ಸ್ಟೈನ್, ‘ನನಗೆ ತಿಳಿಸದೆ ಗೋವಾದಿಂದ ಅವಳು ಹೋಗಿದ್ದಳು’ ಎಂದಿದ್ದಾರೆ.

ಜುಲೈ 11ರಂದು ರಷ್ಯಾದ ಮಹಿಳೆ ನಿನಾ ಕುಟಿನಾ ಮತ್ತು ಆಕೆಯ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯೊಂದರಲ್ಲಿ ಪತ್ತೆಯಾಗಿದ್ದರು. ವಿಚಾರಣೆ ವೇಳೆ ಆಧ್ಯಾತ್ಮಿಕ ಉದ್ದೇಶದಿಂದ ಗುಹೆಯಲ್ಲಿ ವಾಸವಾಗಿರುವುದಾಗಿ ಅವರು ಹೇಳಿದ್ದರು.

ನಿನಾಳನ್ನು 8 ವರ್ಷದ ಹಿಂದೆ ಗೋವಾದಲ್ಲಿ ಭೇಟಿ ಮಾಡಿದ್ದೆ. ಆನಂತರ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದೆವು. ಏಳು ತಿಂಗಳು ಭಾರತದಲ್ಲಿ ಒಟ್ಟಿಗಿದ್ದ ನಾವು ನಂತರ ಹೆಚ್ಚಿನ ಸಮಯವನ್ನು ಉಕ್ರೇನ್‌ನಲ್ಲಿ ಕಳೆದೆವು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ADVERTISEMENT

ಮಕ್ಕಳನ್ನು ನೋಡುವುದಕ್ಕಾಗಿಯೇ ಕಳೆದ ನಾಲ್ಕು ವರ್ಷದಿಂದ ಪದೇ ಪದೇ ಭಾರತಕ್ಕೆ ಬರುತ್ತಿರುವುದಾಗಿ ಅವರು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ನನಗೆ ತಿಳಿಸದೆಯೇ ಮಕ್ಕಳನ್ನು ಕರೆದುಕೊಂಡು ಗೋವಾದಿಂದ ಅವಳು ಹೊರಟು ಹೋಗಿದ್ದಳು. ಅವರು ಎಲ್ಲಿ ಹೋದರು ಎಂಬ ಬಗ್ಗೆ ನನಗೆ ಯಾವ ಮಾಹಿತಿಯು ಇರಲಿಲ್ಲ. ಆತಂಕಗೊಂಡ ನಾನು ನಾಪತ್ತೆ ಪ‍್ರಕರಣ ದಾಖಲಿಸಿದೆ ಎಂದು ಹೇಳಿದ್ದಾರೆ.

ಈಗ ಅವರು ಗೋಕರ್ಣದಲ್ಲಿ ಇದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.

‘ನನಗೆ ಮಕ್ಕಳನ್ನು ನೋಡಬೇಕು ಅನಿಸುತ್ತಿದೆ. ಅವರು ಹೇಗಿದ್ದಾರೆ ಎಂದು ತಿಳಿದುಕೊಳ್ಳಬೇಕು. ಆದರೆ, ಮಕ್ಕಳೊಂದಿಗೆ ಸಮಯ ಕಳೆಯಲು ಆಕೆ ಬಿಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ನಿ ಮತ್ತು ಮಕ್ಕಳ ಖರ್ಚಿಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿರುವುದಾಗಿಯೂ ತಿಳಿಸಿದ್ದಾರೆ.

ಪತ್ನಿ ಮತ್ತು ಮಕ್ಕಳ ಸಂಭಾವ್ಯ ಗಡೀಪಾರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಷ್ಯಾಕ್ಕೆ ನನ್ನ ಮಕ್ಕಳನ್ನು ಕಳುಹಿಸದಂತೆ ಮಾಡಲು ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾರೆ.

ಒಂದು ವೇಳೆ ರಷ್ಯಾಕ್ಕೆ ಅವರು ಹೋದರೆ, ನನ್ನ ಮಕ್ಕಳನ್ನು ಭೇಟಿ ಮಾಡುವುದು ನನಗೆ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈ 11ರಂದು ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ನಿನಾ ಕುಟಿನಾ ಮತ್ತು ಆಕೆಯ ಇಬ್ಬರು ಮಕ್ಕಳು ಪತ್ತೆಯಾಗಿದ್ದರು. ಮೂವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಗೋಕರ್ಣ ಪೊಲೀಸರು, ಕಾರವಾರದ ಸ್ವೀಕಾರ ಕೇಂದ್ರಕ್ಕೆ ಸೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.