ADVERTISEMENT

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ, ಶೀಘ್ರ ಕ್ಲಿನಿಕಲ್ ಟ್ರಯಲ್: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2020, 2:54 IST
Last Updated 13 ನವೆಂಬರ್ 2020, 2:54 IST
ಸಾಂದರ್ಭಿಕ ಚಿತ್ರ – ಕೃಪೆ: ರಾಯಿಟರ್ಸ್
ಸಾಂದರ್ಭಿಕ ಚಿತ್ರ – ಕೃಪೆ: ರಾಯಿಟರ್ಸ್   

ನವದೆಹಲಿ: ಕೋವಿಡ್ ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆ ಭಾರತ ತಲುಪಿದೆ ಎಂದು ವರದಿಯಾಗಿದೆ. ಲಸಿಕೆಯ 2 ಮತ್ತು 3ನೇ ಹಂತದ ಮಾನವ ಪ್ರಯೋಗಕ್ಕೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ಗೆ ಅನುಮತಿ ದೊರೆತ ಬೆನ್ನಲ್ಲೇ ಲಸಿಕೆ ಭಾರತ ತಲುಪಿದೆ.

ಸ್ಪುಟ್ನಿಕ್ ವಿ ಲೋಗೊ ಹೊಂದಿರುವ ಕಂಟೇನರ್‌ಗಳಿಂದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆಯು ಸಣ್ಣ ಟ್ರಕ್‌ಗೆ ವಸ್ತುಗಳನ್ನು ವರ್ಗಾಯಿಸುತ್ತಿರುವ ದೃಶ್ಯವುಳ್ಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಸತ್ಯಾಸತ್ಯತೆ ದೃಢಪಟ್ಟಿಲ್ಲ ಎಂದು ‘ಡೆಕ್ಕನ್‌ ಹೆರಾಲ್ಡ್’ ವರದಿ ಮಾಡಿದೆ.

ಸ್ಪುಟ್ನಿಕ್ ವಿ ಲಸಿಕೆ ಭಾರತ ತಲುಪಿದ್ದು ಶೀಘ್ರದಲ್ಲೇ ಮಾನವ ಪ್ರಯೋಗ ಆರಂಭವಾಗಲಿದೆ ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಸ್ಪುಟ್ನಿಕ್ ವಿ ಲಸಿಕೆ ಕೋವಿಡ್ ರೋಗಕ್ಕೆ ಶೇ.92ರಷ್ಟು ಪರಿಣಾಮಕಾರಿ ಆಗಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ರಷ್ಯಾದ ಗಮಲೆಯಾ ನ್ಯಾಷನಲ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಆ್ಯಂಡ್ ಮೆಕ್ರೊಬಯಾಲಜಿಯಲ್ಲಿ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.