ADVERTISEMENT

2026ರ ವೇಳೆ ಭಾರತಕ್ಕೆ ಬಾಕಿ ಇರುವ ಎಸ್-400 ಕ್ಷಿಪಣಿ ವ್ಯವಸ್ಥೆ ಪೂರೈಕೆ: ರಷ್ಯಾ

ಪಿಟಿಐ
Published 2 ಜೂನ್ 2025, 13:06 IST
Last Updated 2 ಜೂನ್ 2025, 13:06 IST
<div class="paragraphs"><p>ಎಸ್-400 ಕ್ಷಿಪಣಿ ವ್ಯವಸ್ಥೆ</p></div>

ಎಸ್-400 ಕ್ಷಿಪಣಿ ವ್ಯವಸ್ಥೆ

   

(ರಾಯಿಟರ್ಸ್ ಸಂಗ್ರಹ ಚಿತ್ರ)

ನವದೆಹಲಿ: ಎಸ್‌–400 ವಾಯು ರಕ್ಷಣಾ ವ್ಯವಸ್ಥೆಯ ಇನ್ನುಳಿದ ಎರಡು ಘಟಕಗಳನ್ನು 2026ರ ಒಳಗಾಗಿ ಭಾರತಕ್ಕೆ ಒದಗಿಸಲು ರಷ್ಯಾ ಬದ್ಧವಾಗಿದೆ ಎಂದು ರಷ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್‌ ಬಾಬುಷ್ಕಿನ್‌ ಸೋಮವಾರ ಹೇಳಿದ್ದಾರೆ.

ADVERTISEMENT

ವಾಯು ರಕ್ಷಣಾ ಮತ್ತು ಡ್ರೋನ್ ದ್ವಂಸಗೊಳಿಸುವ ವ್ಯವಸ್ಥೆಗಳಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಬಾಬುಷ್ಕಿನ್ ಸುಳಿವು ನೀಡಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಈಚೆಗಿನ ಸಂಘರ್ಷದ ಸಮಯದಲ್ಲಿ ಎಸ್‌-400 ವಾಯು ರಕ್ಷಣಾ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ನಾವು ಕೇಳಿದ್ದೇವೆ. ಎರಡೂ ದೇಶಗಳ ರಕ್ಷಣಾ ಸಹಕಾರಕ್ಕೆ ದೀರ್ಘ ಇತಿಹಾಸವಿದೆ. ವಾಯು ರಕ್ಷಣಾ ವ್ಯವಸ್ಥೆಗಳು ನಮ್ಮ ಪಾಲುದಾರಿಕೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ’ ಎಂದು ಅವರು ಪಿಟಿಐ ವೀಡಿಯೊಗೆ ತಿಳಿಸಿದ್ದಾರೆ. 

ವೈಮಾನಿಕ ದಾಳಿಯನ್ನು ಎದುರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಎಸ್‌–400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಐದು ಘಟಕಗಳಿಗೆ ಭಾರತವು 2018ರಲ್ಲಿ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ ಮೂರು ಘಟಕಗಳನ್ನು ಈಗಾಗಲೇ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ಉಳಿದ ಎರಡು ಎಸ್‌-400 ಘಟಕಗಳ ಹಸ್ತಾಂತರ ಪ್ರಕ್ರಿಯೆ ಒಪ್ಪಂದಕ್ಕೆ ಅನುಗುಣವಾಗಿ 2025-26ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರ ಭಾರತ ಭೇಟಿಯ ಬಗ್ಗೆ ಮಾಹಿತಿ ನೀಡಿದ ಬಾಬುಷ್ಕಿನ್, ‘ಭೇಟಿಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಆದರೆ, ಅವರ ಭೇಟಿ ಶೀಘ್ರದಲ್ಲೇ ನಡೆಯಲಿದೆ. ಈ ತಿಂಗಳಲ್ಲೇ ಭಾರತಕ್ಕೆ ಬರುವರು ಎಂದು ನಿರೀಕ್ಷಿಸುತ್ತೇವೆ’ ಎಂದಿದ್ದಾರೆ.

2018ರಲ್ಲಿ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯ ಐದು ಸ್ಕ್ವಾಡ್ರನ್‌ಗಳಿಗಾಗಿ ಭಾರತವು ರಷ್ಯಾದೊಂದಿಗೆ (5.43 ಬಿಲಿಯನ್ ಡಾಲರ್) ಸಹಿ ಹಾಕಿತ್ತು. ಇದರಂತೆ ಈವರೆಗೆ ಮೂರು ಸ್ಕ್ವಾಡ್ರನ್‌ಗಳನ್ನು ಪೂರೈಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.