
ಶಬರಿಮಲೆ ದರ್ಶನ
ಪಿಟಿಐ ಚಿತ್ರ (ಸಂಗ್ರಹ ಚಿತ್ರ)
ಪತ್ತಂತಿಟ್ಟ (ಕೇರಳ): ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಶಬರಿಮಲೆ ದರ್ಶನಕ್ಕಾಗಿ ‘ಸ್ಥಳದಲ್ಲೇ ಬುಕ್ಕಿಂಗ್’ ಅನ್ನು ದಿನಕ್ಕೆ 5 ಸಾವಿರ ಜನರಿಗೆ ಮಿತಿಗೊಳಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
‘ನೀಲಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರಗಳಲ್ಲಿ ಮಾತ್ರ ಸ್ಥಳದಲ್ಲೇ ಬುಕ್ಕಿಂಗ್ ಸೌಲಭ್ಯ ಲಭ್ಯವಿದೆ. ಪಂಪಾ, ಎರುಮೇಲಿ ಮತ್ತು ಚೆಂಗನ್ನೂರಿನಲ್ಲಿ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನ.24ರವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ಶಬರಿಮಲೆ ದರ್ಶನಕ್ಕೆ ಬರುವ ಭಕ್ತರು ಸಾಧ್ಯವಾದಷ್ಟು ‘ವರ್ಚುವಲ್ ಕ್ಯೂ’ ವ್ಯವಸ್ಥೆ ಮೂಲಕ ತಮ್ಮ ಸ್ಲಾಟ್‌ಗಳನ್ನು ಪಡೆದುಕೊಳ್ಳಬೇಕು. ದರ್ಶನಕ್ಕಾಗಿ ನಿಗದಿಪಡಿಸಿದ ದಿನ ಮತ್ತು ಸಮಯದಲ್ಲಿ ಮಾತ್ರ ಬರಬೇಕು’ ಎಂದು ಮನವಿ ಮಾಡಿದ್ದಾರೆ.
‘ನ.17ರಂದು ದೇವಾಲಯದ ಬಾಗಿಲು ತೆರೆದ 48 ಗಂಟೆಯೊಳಗೆ ಸುಮಾರು ಎರಡು ಲಕ್ಷ ಭಕ್ತರು ಬಂದಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತ್ತು’ ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಟಿಡಿಬಿಯನ್ನು ಟೀಕಿಸಿದ್ದಾರೆ.
‘ಮಂಡಲ– ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ವಾರ್ಷಿಕ 50 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದರು. ಸದ್ಯದ ಈ ವ್ಯವಸ್ಥೆಗಳು ಸಾಕಾಗುವುದಿಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.