ತಿರುವನಂತಪುರ/ಕೊಚ್ಚಿ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ತೂಕ ಕಡಿಮೆಯಾದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಜಾಗೃತ ದಳವು ಪ್ರಾಥಮಿಕ ತನಿಖೆಯ ಮಧ್ಯಂತರ ವರದಿಯನ್ನು ಸಲ್ಲಿಸಿದ ಬಳಿಕ, ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಹಾಗೂ ಕೆ.ವಿ.ಜಯಕುಮಾರ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.
ಎಸ್‌ಪಿ ಎಸ್. ಶಶಿಧರನ್ ಅವರು ಎಸ್‌ಐಟಿ ನೇತೃತ್ವ ವಹಿಸಲಿದ್ದು, ಎಡಿಜಿಪಿ ಎಚ್. ವೆಂಕಟೇಶ್ ಮೇಲ್ವಿಚಾರಣೆ ನಡೆಸಲಿದ್ದಾರೆ. ಸೈಬರ್ ಪೊಲೀಸ್ ಅಧಿಕಾರಿಗಳು ಸಹ ಈ ತಂಡದಲ್ಲಿ ಇರಲಿದ್ದಾರೆ.
2019ರಲ್ಲಿ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಚೆನ್ನೈನ ಕಂಪನಿಗೆ ನೀಡಲಾಗಿತ್ತು. ಈ ವೇಳೆ ಚಿನ್ನದ ತೂಕವು ಕಡಿಮೆಯಾಗಿದ್ದರಿಂದ ತನಿಖೆ ನಡೆಸುವಂತೆ ಟಿಡಿಬಿ ಜಾಗೃತ ದಳಕ್ಕೆ ಹೈಕೋರ್ಟ್ ಸೂಚಿಸಿತ್ತು.
‘ತನಿಖೆಯಿಂದ ಸತ್ಯಾಂಶ ಹೊರಬರಲಿದೆ’: ವಿ.ಎನ್. ವಾಸವನ್
‘ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನ ಸ್ವಾಗತಾರ್ಹ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ’ ಎಂದು ಕೇರಳ ದೇವಸ್ವಂ ಸಚಿವ ವಿ.ಎನ್. ವಾಸವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ತಿರುವಾಂಕೂರು ದೇವಸ್ವಂ ಮಂಡಳಿಯು ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮ ಆಯೋಜಿಸುವ ಮೂರು ದಿನಗಳ ಮುನ್ನ ಈ ಆರೋಪ ಕೇಳಿಬಂತು. ಇದರ ಹಿಂದೆ ಪಿತೂರಿ ಅಡಗಿದೆ. ಪ್ರತಿಪಕ್ಷಗಳು ಈ ವಿಷಯವನ್ನು ತಪ್ಪಾಗಿ ಅರ್ಥೈಸುತ್ತಿವೆ ಹಾಗೂ ಅಪಪ್ರಚಾರದಲ್ಲಿ ತೊಡಗಿವೆ’ ಎಂದು ದೂರಿದ್ದಾರೆ.
ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಗಳಿಗೆ ಚಿನ್ನದ ಲೇಪನದ ಕೊಡುಗೆ ನೀಡಿದ್ದ, ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೋಟಿ ಅವರನ್ನು ಕಟುವಾಗಿ ಟೀಕಿಸಿದ ಸಚಿವರು, ‘ಚಿನ್ನದ ಪೀಠವು ಕಾಣೆಯಾಗಿದೆ ಎಂದಿದ್ದ ಪೋಟಿ, ಬಳಿಕ ಅದನ್ನು ಮರೆಮಾಚುತ್ತಿರುವುದು ಬಹಿರಂಗವಾಗಿದೆ’ ಎಂದಿದ್ದಾರೆ.
‘ಆರಂಭದಲ್ಲಿ ಅರ್ಚಕರಿಗೆ ಸಹಾಯ ಮಾಡಲು ಬಂದಿದ್ದ ಪೋಟಿ, ನಂತರ, ಸಂಶಯಾಸ್ಪದ ಮಧ್ಯಸ್ಥಿಕೆಗಳಲ್ಲಿ ತೊಡಗಿಕೊಂಡಿದ್ದಾರೆ’ ಎಂದು ದೂರಿದ್ದಾರೆ.
ಸಚಿವರ ರಾಜೀನಾಮೆಗೆ ಆಗ್ರಹ; ಕಲಾಪ ಮುಂದೂಡಿಕೆ
ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ವಿಚಾರವಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಶಾಸಕರು ಸೋಮವಾರ ಕೇರಳ ವಿಧಾನಸಭೆ ಕಲಾಪದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಗದ್ದಲದ ವಾತಾವರಣ ಉಂಟಾಗಿತ್ತು. ವಿರೋಧಪಕ್ಷದ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಬ್ಯಾನರ್‌ಗಳನ್ನು ಹಿಡಿದು ‘ಸರ್ಕಾರವು ಅಯ್ಯಪ್ಪನ ಚಿನ್ನವನ್ನು ಕದ್ದಿದೆ’ ಎಂದು ಆರೋಪಿಸಿ ಗದ್ದಲ ಆರಂಭಿಸಿದರು. ಇದರಿಂದ ಸಭಾಧ್ಯಕ್ಷ ಎ.ಎನ್. ಶಂಶೀರ್ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ‘ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು. ದೇವಸ್ವಂ ಸಚಿವ ವಿ.ಎನ್.ವಾಸವನ್ ರಾಜೀನಾಮೆ ನೀಡಬೇಕು. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಅವರನ್ನು ಉಚ್ಚಾಟಿಸಬೇಕು. ಈ ಬೇಡಿಕೆಗಳು ಈಡೇರುವವರೆಗೆ ಯುಡಿಎಫ್ ಪ್ರತಿಭಟನೆ ನಡೆಸಲಿದೆ’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದರು. ‘ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ಪ್ರಮಾಣ ಕಡಿಮೆಯಾಗಿರುವುದು 2022ರ ದೇವಸ್ವಂ ಮಂಡಳಿಯ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಆದರೆ ಇದನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರ ಹಾಗೂ ದೇವಸ್ವಂ ಮಂಡಳಿ ಅಧಿಕಾರಿಗಳು ಲೂಟಿಯಲ್ಲಿ ತೊಡಗಿರುವುದೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.