ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚದಲ್ಲಿನ ಚಿನ್ನದ ಕಳವು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ಶುಕ್ರವಾರ ಸೂಚಿಸಿದೆ.
‘ಇದುವರೆಗಿನ ತನಿಖೆಯನ್ನು ಗಮನಿಸಿದಾಗ, ದ್ವಾರಪಾಲಕ ಮೂರ್ತಿಗಳ ಕವಚದ ಚಿನ್ನ ಲೇಪನ ಕಾರ್ಯದಲ್ಲಿ ಚಿನ್ನದ ದುರುಪಯೋಗ ಆಗಿರುವುದು ಕಂಡುಬಂದಿದೆ’ ಎಂದು ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್ ವಿ ಮತ್ತು ಕೆ.ವಿ ಜಯಕುಮಾರ್ ಅವರ ಪೀಠವು ಅಭಿಪ್ರಾಯಪಟ್ಟಿತು.
‘ಈ ಪ್ರಕರಣದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ, 6 ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಹಾಗೂ ಪ್ರತಿ ವಾರವೂ ತನಿಖೆಯ ಸ್ಥಿತಿಗತಿಯನ್ನು ಕೋರ್ಟ್‌ಗೆ ತಿಳಿಸುವಂತೆ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಎಚ್. ವೆಂಕಟೇಶ್ ಅವರಿಗೆ ನ್ಯಾಯಪೀಠ ಸೂಚಿಸಿತು.
ಗುಪ್ತಚರ ವರದಿ: ದ್ವಾರಪಾಲಕ ಮೂರ್ತಿಗಳ ಕವಚಕ್ಕೆ ಚಿನ್ನದ ಮರು ಲೇಪನ ಮಾಡಲು ಪ್ರಾಯೋಜಕರಾದ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೋಟಿ 474.9 ಗ್ರಾಂನಷ್ಟು ಚಿನ್ನವನ್ನು ಹಸ್ತಾಂತರಿಸಿದ್ದರು ಮತ್ತು ಚಿನ್ನ ಲೇಪನದ ಬಳಿಕ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾಗಿದೆ ಎನ್ನುವುದು ಕೋರ್ಟ್‌ಗೆ ಸಲ್ಲಿಸಲಾಗಿರುವ ಗುಪ್ತಚರ ವರದಿಯಲ್ಲೂ ಬಹಿರಂಗಗೊಂಡಿದೆ ಎಂದು ಪೀಠ ಹೇಳಿತು. ಈ ವರದಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಮತ್ತು ಎಡಿಜಿಪಿಗೆ ಹಸ್ತಾಂತರಿಸಲು ಪೀಠ ಸೂಚಿಸಿತು.
ಆಲಪ್ಪುಳ/ಕೇರಳ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಗೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದನ್ನು ಕ್ಷೇತ್ರದ ತಂತ್ರಿ ಕಂಡರರ್ ರಾಜೀವರ್ ಸ್ವಾಗತಿಸಿದ್ದಾರೆ.
‘ಇತ್ತೀಚೆಗೆ ಬಹಿರಂಗಗೊಂಡಿರುವ ಕೆಲವು ಸಂಗತಿಗಳು ಆಶ್ಚರ್ಯ ಮೂಡಿಸಿವೆ. ಇದರಿಂದ ಭಕ್ತರ ಮನಸ್ಸಿಗೆ ತೀವ್ರ ನೋವುಂಟಾಗಿದೆ. ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ, ಎಸ್‌ಐಟಿ ರಚನೆಯನ್ನು ಸ್ವಾಗತಿಸುತ್ತೇನೆ’ ಎಂದು ರಾಜೀವರ್ ಶುಕ್ರವಾರ ತಮ್ಮ ಚೆಂಗನ್ನೂರಿನ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ದೇವಸ್ಥಾನ ತಂತ್ರಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ನಾನು ನೋಡಿಕೊಳ್ಳುತ್ತೇನೆ. ಚಿನ್ನ ಕಳುವಾಗಿರುವ ಸಂಗತಿಯು ನೋವು ತಂದಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳುವಾಗಿರುವುದು ’ಗಂಭೀರ ಲೋಪ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಹೇಳಿದ್ದಾರೆ. ‘ಒಂದು ವೇಳೆ ದೇವಸ್ಥಾನದ ಸಿಬ್ಬಂದಿ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರೆ ಖಂಡಿತ ಶಿಕ್ಷೆಯಾಗಬೇಕು. ನನ್ನಿಂದಲೂ ಏನಾದರೂ ಲೋಪ ಆಗಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಪದ್ಮಕುಮಾರ್ ‘ಟಿಡಿಬಿ‘ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನ ಮಾಡಲು ಚೆನ್ನೈನ ಕಂಪನಿಗೆ ನೀಡಲಾಗಿತ್ತು. ಆ ನಂತರ ಚಿನ್ನದ ತೂಕವು ಕಡಿಮೆಯಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಚಿನ್ನ ಕಳವು ಪ್ರಕರಣದಲ್ಲಿ ‘ದೇವಸ್ವಂ ಸಚಿವ ಮತ್ತು ಟಿಡಿಬಿ ಅಧಿಕಾರಿಗಳನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು’ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ಮುಖಂಡ ವಿ.ಡಿ ಸತೀಶನ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.