ADVERTISEMENT

ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

ಪಿಟಿಐ
Published 18 ನವೆಂಬರ್ 2025, 10:56 IST
Last Updated 18 ನವೆಂಬರ್ 2025, 10:56 IST
<div class="paragraphs"><p>ಶಬರಿಮಲೆಯಲ್ಲಿ ಸರತಿಯಲ್ಲಿ ನಿಂತಿರುವ ಭಕ್ತರು</p></div>

ಶಬರಿಮಲೆಯಲ್ಲಿ ಸರತಿಯಲ್ಲಿ ನಿಂತಿರುವ ಭಕ್ತರು

   

– ಪಿಟಿಐ

ಪತ್ತನಂತಿಟ್ಟ: ವಾರ್ಷಿಕ ‘ಮಕರ ವಿಳಕ್ಕು’ ತೀರ್ಥಯಾತ್ರೆ ಋತುವಿನ ಎರಡನೇ ದಿನ ಶಬರಿಮಲೆಯ ಅಯ್ಯಪ್ಪ ದೇಗುಲ‌ಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಭಾರಿ ಜನ ದಟ್ಟಣೆ ನಿರ್ಮಾಣವಾಗಿದೆ. ಮಂಗಳವಾರ ಸರತಿಯಲ್ಲಿ ನಿಂತಿರುವ ಭಕ್ತರು ಹಲವು ಗಂಟೆಗಳು ಕುಡಿಯಲು ನೀರು ಸಿಗದೆ ಪರದಾಡುವಂತಾಯಿತು.

ADVERTISEMENT

ದೂರುಗಳು ಬಂದ ಕೂಡಲೇ ಭಕ್ತರಿಗೆ ನೀರು ನೀಡಲು ಹೆಚ್ಚುವರಿ 200 ಸಿಬ್ಬಂದಿಯನ್ನು ನಿಯೋಜಿಸಲಾಯಿತು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್‌ನ (ಟಿಡಿಬಿ) ನೂತನ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ. ಅಲ್ಲದೆ ದರ್ಶನ ಪಡೆಯಲು ಭಕ್ತರು ಯಾವುದೇ ತೊಂದರೆ ಇಲ್ಲದೆ 18 ಮೆಟ್ಟಿಲುಗಳನ್ನು ಹತ್ತಲು ಹಾಗೂ ಸರತಿ ಸಾಲನ್ನು ಮುರಿದು ಮುಂದಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ

‘ಇದುವರೆಗೆ ನಾನು ದೇವಸ್ಥಾನದಲ್ಲಿ ಈ ಪ್ರಮಾಣದ ಜನಸಂದಣಿ ನೋಡಿಲ್ಲ. ಕೆಲವರು ಸರತಿ ತಪ್ಪಿಸಿ ಮುನ್ನುಗ್ಗುತ್ತಿದ್ದಾರೆ ಎಂದು ತೋರುತ್ತದೆ. ಇಲ್ಲಿರುವ ಭಾರಿ ಜನಸಂದಣಿಯಿಂದ ಭಯಭೀತನಾಗಿದ್ದೇನೆ’ ಎಂದು ಜಯಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಿಲಕ್ಕಲ್‌ನಲ್ಲಿಯೇ ಜನರನ್ನು ನಿಯಂತ್ರಿಸಿ, ಪಂಪಾದಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಬೇಕು, ಆ ಮೂಲಕ ದರ್ಶನಕ್ಕೆ ಭಕ್ತರು 3–5 ಗಂಟೆ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಬೇಕು ಎಂದು ನಿರ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

‘ಜನ ನಿಲಕ್ಕಲ್‌ನಲ್ಲಿಯೇ ಕಾಯಬಹುದು. ಅದಕ್ಕೆ ಬೇಕಾದ ವ್ಯವಸ್ಥೆಗಳು ಅಲ್ಲಿವೆ. ಅಲ್ಲದೆ ಅಲ್ಲಿ ಏಳು ಹೆಚ್ಚುವರಿ ಸ್ಪಾಟ್ ಬುಕ್ಕಿಂಗ್ ಕೌಂಟರ್‌ಗಳನ್ನು ತೆರೆಯುತ್ತೇವೆ. ಅದಕ್ಕಾಗಿ ಅವರು ಪಂಪಾಗೆ ಬರುವ ಅಗತ್ಯ ಇಲ್ಲ. ನಿತ್ಯ ಸ್ಪಾಟ್ ಬುಕ್ಕಿಂಗ್‌ಗೆ ಮಿತಿ ಹಾಕುವ ಸಾಧ್ಯತೆಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ. ಯಾತ್ರಿಗಳು ಸ್ಥಾಪಿಸಲಾಗಿರುವ ‘ಕ್ಯೂ ಕಾಂಪ್ಲೆಕ್ಸ್’ ಮೂಲಕ ಪ್ರವೇಶಿಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

‘ಕ್ಯೂ ಕಾಂಪ್ಲೆಕ್ಸ್’ ಮೂಲಕ ಪ್ರವೇಶಿಸಿದರೆ ಅವರಿಗೆ ನೀರು ಹಾಗೂ ಬಿಸ್ಕತ್ತು ನೀಡಲು ಸುಲಭವಾಗುತ್ತದೆ. ಹಲವು ಗಂಟೆಗಳಿಂದ ಸರತಿಯಲ್ಲಿ ನಿಂತಿರುವವರಿಗೆ ನೀರು ನೀಡಲು 200 ಹೆಚ್ಚುವರಿ ಮಂದಿಯನ್ನು ನಿಯೋಜಿಸಲಾಗಿದೆ. ಶಬರಿಮಲೆಯಲ್ಲಿರುವ ಶೌಚಾಲಯಗಳ ಶುದ್ಧೀಕರಣಕ್ಕೆ ತಮಿಳುನಾಡಿನಿಂದ ಸುಮಾರು 200 ಸ್ವಚ್ಛತಾ ಸಿಬ್ಬಂದಿಯನ್ನು ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 16ರಂದು ‘ಮಕರ ವಿಳಕ್ಕು’ ಯಾತ್ರಾ ಋತು ಆರಂಭವಾಗಿದ್ದು, ಮಂಗಳವಾರ ಮಧ್ಯಾಹ್ನ 2 ಲಕ್ಷ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.