ADVERTISEMENT

ಶಬರಿಮಲೆ ಹಿಂಸೆ ತೀವ್ರ: ಕೇರಳ ತತ್ತರ

ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ವಿರೋಧ: ಬಂದ್‌, ರಸ್ತೆ ತಡೆ, ಮೂವರಿಗೆ ಇರಿತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:20 IST
Last Updated 3 ಜನವರಿ 2019, 20:20 IST
ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು –ಎಎಫ್‌ಪಿ ಚಿತ್ರ
ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು –ಎಎಫ್‌ಪಿ ಚಿತ್ರ   

ತಿರುವನಂತಪುರ: ಋತುಸ್ರಾವ ವಯೋಮಾನದ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದರ ವಿರುದ್ಧ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ಕೇರಳ ಗುರುವಾರ ಪ್ರಕ್ಷುಬ್ಧವಾಗಿತ್ತು. ಹಿಂದುತ್ವವಾದಿ ಸಂಘಟನೆಗಳ ಕಾರ್ಯ
ಕರ್ತರು ರಾಜ್ಯದ ವಿವಿಧೆಡೆ ರಸ್ತೆ ತಡೆ ನಡೆಸಿದ್ದಾರೆ.

ಹಿಂಸೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಮೂವರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದುತ್ವವಾದಿ ಗುಂಪುಗಳ ಒಕ್ಕೂಟವಾದ ಶಬರಿಮಲೆ ಕರ್ಮ ಸಮಿತಿಯು ಗುರುವಾರ ಕೇರಳ ಬಂದ್‌ಗೆ ಕರೆ ನೀಡಿತ್ತು. ಪ್ರತಿಭಟನಕಾರರು ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲದೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ರಾಜ್ಯದ ವಿವಿಧೆಡೆ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ADVERTISEMENT

ತ್ರಿಶ್ಶೂರ್‌ನಲ್ಲಿ ಬಿಜೆಪಿ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಕಾರ್ಯ
ಕರ್ತರ ನಡುವಣ ಸಂಘರ್ಷದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಇರಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಗುರುವಾರ ರಸ್ತೆಗಿಳಿಯಲಿಲ್ಲ. ಹಾಗಾಗಿ ಆಟೊರಿಕ್ಷಾಗಳು ಮಾತ್ರ ನಗರಗಳು ಮತ್ತು ಪಟ್ಟಣಗಳಲ್ಲಿ ಓಡಾಡುತ್ತಿದ್ದವು.

ಪಟ್ಟನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ನಡೆದ ಕಲ್ಲುತೂರಾಟದಲ್ಲಿ 55 ವರ್ಷದ ಚಂದ್ರನ್‌ ಉಣ್ಣಿತ್ತಾನ್‌ ಎಂಬವರು ಗಾಯಗೊಂಡು ಬಳಿಕ ತಡರಾತ್ರಿ ಮೃತಪಟ್ಟರು. ಆದರೆ, ಉಣ್ಣಿತ್ತಾನ್‌ ಅವರು ಹೃದಯಾಘಾತದಿಂದ ಸತ್ತರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.