ನವದೆಹಲಿ: ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಪ್ರವೇಶಿಸುವುದಕ್ಕೆ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 4:1 ಬಹುಮತದ ತೀರ್ಪು ನೀಡಿದೆ.
ಶತಮಾನಗಳಿಂದ ಆಚರಿಸಿ ಕೊಂಡು ಬಂದಿರುವ ಈ ನಿಷೇಧ ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಎಂಬ ಮಹತ್ವದ ತೀರ್ಪು ಶುಕ್ರವಾರ ಪ್ರಕಟವಾಯಿತು.
ನಿಷೇಧವು ಲಿಂಗತಾರತಮ್ಯದಿಂದ ಕೂಡಿದೆ ಮತ್ತು ಹಿಂದೂ ಮಹಿಳೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಶಬರಿಮಲೆ ದೇವಾಲಯದಲ್ಲಿ ಇದ್ದ ಪದ್ಧತಿಯನ್ನು ಧಾರ್ಮಿಕ ಆಚರಣೆಯ ಭಾಗ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ಧರ್ಮ ಎಂಬುದು ಜೀವನವಿಧಾನಕ್ಕೆ ಸಂಬಂಧಿಸಿದ ವಿಚಾರ ಮತ್ತು ಜೀವನವನ್ನು ದೈವತ್ವದ ಜತೆಗೆ ಜೋಡಿಸುವ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
‘ಸೃಷ್ಟಿಕರ್ತನ ಜತೆಗೆ ಇರುವ ಸಂಬಂಧವು ಎಲ್ಲವನ್ನೂ ಮೀರಿದ್ದಾಗಿದೆ. ಅಲ್ಲಿ ಸಮಾಜವು ಹಾಕಿಕೊಂಡ ಯಾವುದೇ ಅಡೆ ತಡೆಗಳಿಗೆ ಅವಕಾಶ ಇಲ್ಲ. ಶುದ್ಧವಾದ ಭಕ್ತಿಯ ಮಾರ್ಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯು ಅಡ್ಡ ನಿಲ್ಲುವುದಕ್ಕೆ ಅವಕಾಶವೇ ಇಲ್ಲ’ ಎಂದು ಪೀಠ ಹೇಳಿದೆ.
‘ಶಾರೀರಿಕ ವಿಚಾರಗಳ ನೆಪದಲ್ಲಿ ಮಹಿಳೆಯನ್ನು ದಮನ ಮಾಡುವುದಕ್ಕೆ ಕಾನೂನಿನ ಸಮ್ಮತಿಯ ಮುದ್ರೆ ಒತ್ತಲು ಸಾಧ್ಯವಿಲ್ಲ. ತಾರತಮ್ಯ ಅಥವಾ ಪ್ರತ್ಯೇಕತೆಯ ಆಧಾರದಲ್ಲಿ ಸ್ತ್ರೀಯನ್ನು ಹೊರಗೆ ಇರಿಸುವುದು ಸಮರ್ಥನೀಯವಲ್ಲ ಮತ್ತು ಒಪ್ಪತಕ್ಕದ್ದಲ್ಲ. ಅದು ಸಂವಿಧಾನದ ಅಂಗೀಕಾರ ಪಡೆಯುವುದು ಸಾಧ್ಯವೂ ಇಲ್ಲ’ ಎಂದು ದೀಪಕ್ ಮಿಶ್ರಾ ಹೇಳಿದ್ದಾರೆ.
**
ನಿಷೇಧ ತೆರವು ಏಕೆ?
ಮಹಿಳೆಯರ ಶಾರೀರಿಕ ಕಾರಣಗಳನ್ನು ಮುಂದಿಟ್ಟು ಅವರಿಗೆ ಪ್ರವೇಶ ನಿರಾಕರಿಸಿ ಅವರ ಘನತೆಗೆ ಕುಂದು ಉಂಟು ಮಾಡುವ ಯಾವುದೇ ಪದ್ಧತಿಯು ಅಸಾಂವಿಧಾನಿಕ
ಅಯ್ಯಪ್ಪ ಸ್ವಾಮಿಯ ಭಕ್ತರು ಪ್ರತ್ಯೇಕ ಪಂಥಕ್ಕೆ ಸೇರಿದವರಲ್ಲ
10–50ರ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಧರ್ಮದ ಅನಿವಾರ್ಯ ಆಚರಣೆ ಅಲ್ಲ
ಧಾರ್ಮಿಕವಲ್ಲದ ಕಾರಣಗಳಿಗಾಗಿ ನಿಷೇಧವು ಜಾರಿಯಲ್ಲಿದೆ. ಶತಮಾನಗಳಿಂದ ಇರುವ ತಾರತಮ್ಯಕ್ಕೆ ಇದು ಸಂಕೇತವಾಗಿದೆ
ಪ್ರವೇಶ ನಿಷೇಧವು ಸಂವಿಧಾನದ 25 ಮತ್ತು 26ನೇ (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು) ವಿಧಿಗಳ ಉಲ್ಲಂಘನೆಯಾಗಿದೆ
ಈ ನಿಷೇಧವು ಕೇರಳದ ‘ಹಿಂದೂ ಸಾರ್ವಜನಿಕ ಪೂಜಾ ಸ್ಥಳಗಳ (ಪ್ರವೇಶದ ಹಕ್ಕು) ನಿಯಮಗಳ ಉಲ್ಲಂಘನೆ
ಶಬರಿಮಲೆಯಲ್ಲಿ ಮಹಿಳೆಯರು ಪೂಜೆ ಸಲ್ಲಿಸಲು ಅವಕಾಶ ಕೊಡುವುದರಿಂದ ಹಿಂದೂ ಧರ್ಮದ ಸ್ವರೂಪದಲ್ಲಿ ಮೂಲಭೂತವಾದ ಯಾವುದೇ ಬದಲಾವಣೆ ಆಗುವುದಿಲ್ಲ
**
ಇಂದೂ ಮಲ್ಹೋತ್ರಾ ಭಿನ್ನ ದಾರಿ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧ ತೆರವು ಮಾಡಬಾರದು ಎಂದು ಸಂವಿಧಾನ ಪೀಠದಲ್ಲಿ ಇದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಬಲವಾಗಿ ಪ್ರತಿಪಾದಿಸಿದ್ದಾರೆ. ಬಹುಮತದ ತೀರ್ಪಿಗಿಂತ ಭಿನ್ನವಾದ ತೀರ್ಪನ್ನು ಅವರು ನೀಡಿದ್ದಾರೆ.
ಸತಿಯಂತಹ ಸಾಮಾಜಿಕ ಅನಿಷ್ಠಗಳನ್ನು ಬಿಟ್ಟರೆ ಬೇರೆ ಧಾರ್ಮಿಕ ವಿಚಾರಗಳು ತಪ್ಪೇ ಸರಿಯೇ ಎಂಬುದನ್ನು ನ್ಯಾಯಾಲಯಗಳು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
**
‘ಹೋರಾಟ ನಿಲ್ಲದು’
ಇದು ದುರದೃಷ್ಟಕರ ತೀರ್ಪು ಎಂದು ಅಯ್ಯಪ್ಪ ಧರ್ಮ ಸೇನಾದ ಅಧ್ಯಕ್ಷ ರಾಹುಲ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಂಘಟನೆಯು ತೀರ್ಪಿನ ವಿರುದ್ಧ ಪುನರ್‌ವಿಮರ್ಶೆ ಅರ್ಜಿ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ. ಮಹಿಳೆಯರ ಪ್ರವೇಶ ನಿಷೇಧ ಮುಂದುವರಿಸುವುದಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
**
ದೇಶದಲ್ಲಿ ಜಾತ್ಯತೀತವಾಧ ವಾತಾವರಣ ಸೃಷ್ಟಿಸಬೇಕು ಎಂಬ ಕಾರಣಕ್ಕೆ ಆಳವಾದ ಅರ್ಥಗಳನ್ನು ಹೊಂದಿರುವ ಧಾರ್ಮಿಕ ವಿಚಾರಗಳನ್ನು ಬದಲಾಯಿಸಲು ಯತ್ನಿಸಬಾರದು.
-ಇಂದೂ ಮಲ್ಹೋತ್ರಾ, ನ್ಯಾಯಮೂರ್ತಿ
*
ಭಕ್ತಿಯನ್ನು ತಾರತಮ್ಯದಿಂದ ನೋಡಬಾರದು ಮತ್ತು ಭಕ್ತಿಯಲ್ಲಿನ ಸಮಾನತೆಯನ್ನು ತುಳಿದು ಹಾಕಲು ಪುರುಷಪ್ರಧಾನ ಮನಸ್ಥಿತಿಯನ್ನು ಬಳಸಬಾರದು.
-ದೀಪಕ್ ಮಿಶ್ರಾ, ಮುಖ್ಯ ನ್ಯಾಯಮೂರ್ತಿ
*
ಮಹಿಳೆಯರ ಆರಾಧನೆಯ ಹಕ್ಕನ್ನು ನಿರಾಕರಿಸಲು ಧರ್ಮವನ್ನು ನೆಪವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಇದು ಮಾನವ ಘನತೆಗೆ ವಿರುದ್ಧವಾದುದು.
-ಚಂದ್ರಚೂಡ್, ನ್ಯಾಯಮೂರ್ತಿ
ಇದನ್ನೂ ಓದಿ: ಅಯ್ಯಪ್ಪ ಸನ್ನಿದಿಗೆ ಮಹಿಳಾ ಹಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.