
ಸಚಿನ್ ತೆಂಡೂಲ್ಕರ್ ಕುಟುಂಬಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಪುತ್ರ ಅರ್ಜುನ್ ಮದುವೆಗೆ ಆಹ್ವಾನಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕುಟುಂಬ ಸಮೇತರಾಗಿ ಭೇಟಿಯಾಗಿರುವ ಫೋಟೊಗಳನ್ನು ಸಚಿನ್, ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘ಕಳೆದ ಫೆಬ್ರುವರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಮ್ಮನ್ನು ಆತ್ಮೀಯವಾಗಿ ಆತಿಥ್ಯ ವಹಿಸಿದ್ದರು. ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ಆಹ್ವಾನಿಸಲು ಇಂದು ರಾಷ್ಟ್ರಪತಿಗಳನ್ನು ಭೇಟಿಯಾದಾಗ ನಾವು ಆ ಕೆಲವು ಪ್ರೀತಿಯ ನೆನಪುಗಳನ್ನು ಮೆಲುಕು ಹಾಕಿದೆವು. ರಾಷ್ಟ್ರಪತಿಗಳೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದ’ ಎಂದು ಸಚಿನ್ ಪೋಸ್ಟ್ ಮಾಡಿದ್ದಾರೆ.
‘ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರನ್ನು ಆಹ್ವಾನಿಸಲಾಯಿತು. ಮೋದಿ ಅವರ ಆಶೀರ್ವಾದ ಮತ್ತು ಯುವ ದಂಪತಿಗೆ ನೀಡಿದ ಸಲಹೆಗಾಗಿ ಧನ್ಯವಾದಗಳು’ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಕೇಂದ್ರ ದೆಹಲಿಯ ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಸಚಿನ್ ಅವರ ಪತ್ನಿ ಅಂಜಲಿ, ಪುತ್ರಿ ಸಾರಾ, ಪುತ್ರ ಅರ್ಜುನ್, ಅವರ ಭಾವಿ ಪತ್ನಿ ಸಾನಿಯಾ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದಾರೆ.
‘ನಮ್ಮ ಕುಟುಂಬಕ್ಕೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಮತ್ತು ಅರ್ಜುನ್-ಸಾನಿಯಾ ಅವರ ಮದುವೆಗೆ ಆಹ್ವಾನಿಸುವ ಅವಕಾಶ ಸಿಕ್ಕಿತು’ ಎಂದು ಸಚಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೋವಾ ಪರ ಆಡುವ ವೃತ್ತಿಪರ ಕ್ರಿಕೆಟಿಗ ಅರ್ಜುನ್ ಮತ್ತು ಸಾನಿಯಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.