ADVERTISEMENT

ಸ್ಫೋಟಕ ಪತ್ತೆ ಪ್ರಕರಣ: ಮಾ. 25ರವರೆಗೆ ಎನ್‌ಐಎ ಕಸ್ಟಡಿಗೆ ಸಚಿನ್ ವಾಜೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 21:34 IST
Last Updated 14 ಮಾರ್ಚ್ 2021, 21:34 IST
ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ
ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ   

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಬಂಧಿತರಾಗಿದ್ದ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಮಾರ್ಚ್‌ 25ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಒಪ್ಪಿಸಲಾಗಿದೆ.

ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ದಕ್ಷಿಣ ಮುಂಬೈನ ನ್ಯಾಯಾಲಯದಲ್ಲಿ ವಾಜೆ (49) ಅವರನ್ನು ಹಾಜರುಪಡಿಸಲಾಯಿತು. ಹೆಚ್ಚಿನ ತನಿಖೆಗಾಗಿ ವಾಜೆ ಅವರನ್ನು ಎನ್‌ಐಎ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ. ಫೆಬ್ರುವರಿ 25ರಂದು ಅಂಬಾನಿ ಅವರ ಮನೆ ಮುಂದೆ ಸ್ಫೋಟಕ ತುಂಬಿದ ಸ್ಕಾರ್ಪಿಯೊ ಕಾರು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಮೇಲೆ ವಾಜೆ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ವಾಜೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಶನಿವಾರ ಬೆಳಿಗ್ಗೆ 11.30ಕ್ಕೆ ದಕ್ಷಿಣ ಮುಂಬೈನ ಕಂಬಾಲ್ಲಾ ಹಿಲ್‌ ಪ್ರದೇಶದಲ್ಲಿರುವ ಎನ್‌ಐಎ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಸುಮಾರು 12 ಗಂಟೆಗಳ ವಿಚಾರಣೆ ಬಳಿಕ, ಸ್ಫೋಟಕಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಾಜೆ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.

ADVERTISEMENT

ಅಂಬಾನಿ ಮನೆ ಮುಂದೆ ಪತ್ತೆಯಾದ ಸ್ಫೋಟಕಗಳಿದ್ದ ಸ್ಕಾರ್ಪಿಯೊ ತಮ್ಮದು ಎಂದು ಠಾಣೆ ಮೂಲದ ವ್ಯಾಪಾರಿ ಮನ್‌ಸುಖ್‌ ಹಿರೇನ್‌ (45) ಹೇಳಿಕೊಂಡಿದ್ದರು. ತಮ್ಮ ವಾಹನ ಫೆ.18ರಂದು ಐರೋಲಿ–ಮುಲುಂದ್‌ ಸೇತುವೆ ಬಳಿಯಿಂದ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಹಿರೇನ್‌ ತಿಳಿಸಿದ್ದರು.

ಆದರೆ, ಮಾರ್ಚ್‌ 5ರಂದು ಠಾಣೆಯಲ್ಲಿ ಹಿರೇನ್ ಅವರ ಮೃತ ದೇಹ ಪತ್ತೆಯಾಗಿತ್ತು. ಹಿರೇನ್‌ ಅವರ ಅನುಮಾನಾಸ್ಪದ ಸಾವಿನ ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.

ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸಹ ಹಿರೇನ್‌ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ತಮ್ಮ ಪತಿಯ ಸಾವಿನ ಹಿಂದೆ ವಾಜೆ ಕೈವಾಡವಿದೆ ಎಂದು ಹಿರೇನ್‌ ಅವರ ಪತ್ನಿ ವಿಮಲಾ ಆರೋಪಿಸಿದ್ದರು.

‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಎಂದೇ ಖ್ಯಾತಿ ಪಡೆದಿದ್ದ ಸಚಿನ್‌ ವಾಜೆ, ಕ್ರಿಮಿನಲ್‌ಗಳು ಎನ್ನಲಾದ 63 ಮಂದಿಯನ್ನು ಎನ್‌ಕೌಂಟರ್‌ಗಳಲ್ಲಿ ಸಾಯಿಸಿದ್ದರು. 2002ರಲ್ಲಿ ನಡೆದ ಘಾಟ್ಕೋಪರ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಖ್ವಾಜಾ ಯೂನುಸ್‌ ಪೊಲೀಸ್‌ ವಶದಲ್ಲಿ ಸಾವಿಗೀಡಾಗಿದ್ದ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ 2004ರಲ್ಲಿ ವಾಜೆ ಅಮಾನತುಗೊಂಡಿದ್ದರು. ಬಳಿಕ ಕಳೆದ ವರ್ಷ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.

ಅಮಾನುತುಗೊಂಡಿದ್ದ ಅವಧಿಯಲ್ಲಿ ವಾಜೆ ಶಿವಸೇನಾ ಸೇರಿದ್ದರು. 2008ರವರೆಗೆ ವಾಜೆ ಶಿವಸೇನಾ ಸದಸ್ಯರಾಗಿದ್ದರು ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಹ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರನ್ನು ಬಂಧಿಸಿದ ತಂಡದ ನೇತೃತ್ವವನ್ನು ವಾಜೆ ವಹಿಸಿದ್ದರು.

ಇನ್ನೊವಾ ಕಾರು ವಶ

ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಭಾನುವಾರ ಬಿಳಿ ಬಣ್ಣದ ಇನ್ನೋವಾ ಕಾರನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದೆ.

ಫೆಬ್ರುವರಿ 25ರಂದು ಅಂಬಾನಿ ಅವರ ಮನೆ ಮುಂದೆ ಸ್ಫೋಟಕ ತುಂಬಿದ ಸ್ಕಾರ್ಪಿಯೋ ಕಾರು ನಿಲುಗಡೆ ಮಾಡಲಾಗಿತ್ತು. ಅದಕ್ಕೂ ಮುನ್ನ ಅದನ್ನು ಇನೋವಾ ಕಾರೊಂದು ಹಿಂಬಾಲಿಸುತ್ತಿತ್ತು. ಇದು ಅದೇ ಇನೋವಾ ಕಾರು ಇರಬಹುದೇ ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

‘ಆರ್‌ಟಿಒನ ನೋಂದಣಿ ಸಂಖ್ಯೆ ‘ಎಂಎಚ್ 01 A ಝ್‌ಎ 403’ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರಿನ ಹಿಂದೆ ಪೊಲೀಸ್‌ ಎಂದು ಬರೆಯಲಾಗಿದೆ. ಸದ್ಯ ಟೋಯಿಂಗ್‌ ವ್ಯಾನ್‌ ಸಹಾಯದಿಂದ ಕಾರನ್ನು ಪೆದ್ದರ್‌ ರಸ್ತೆಯಲ್ಲಿರುವ ಎನ್‌ಐಎ ಕಚೇರಿಗೆ ತರಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನೈತಿಕ ಬಲ ಕುಗ್ಗಿಸುವ ಪ್ರಯತ್ನ’

ಮುಂಬೈ ಪೊಲೀಸರ ನೈತಿಕತೆ ಕುಗ್ಗಿಸಲು ಮತ್ತು ಮಹಾರಾಷ್ಟ್ರದಲ್ಲಿ ಅಸ್ಥಿರತೆ ಸೃಷ್ಟಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.

‘ನಾವು ಎನ್‌ಐಎ ಗೌರವಿಸುತ್ತೇವೆ. ಆದರೆ, ಈ ಪ್ರಕರಣದ ತನಿಖೆಯನ್ನು ನಮ್ಮ ಪೊಲೀಸರೇ ಕೈಗೊಳ್ಳಬಹುದಿತ್ತು. ಮುಂಬೈ ಪೊಲೀಸ್‌ ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ವಿಶೇಷ ಗೌರವವಿದೆ. ಆದರೆ, ಸಿಬಿಐ ಮತ್ತು ಎನ್‌ಐಎನಂತಹ ಕೇಂದ್ರದ ತನಿಖಾ ಸಂಸ್ಥೆಗಳು ಪದೇ ಪದೇ ಮಧ್ಯ ಪ್ರವೇಶಿಸಿ ಮುಂಬೈ ಪೊಲೀಸರ ನೈತಿಕತೆಯನ್ನು ಕುಗ್ಗಿಸುತ್ತಿವೆ’ ಎಂದು ಶಿವಸೇನಾ ಮುಖ್ಯ ವಕ್ತಾರ ಸಂಜಯ್‌ ರಾವುತ್‌ ತಿಳಿಸಿದ್ದಾರೆ. ‘ವಾಜೆ ಪ್ರಾಮಾಣಿಕ ಮತ್ತು ಸಮರ್ಥ ಅಧಿಕಾರಿ. ಟಿಆರ್‌ಪಿ ಹಗರಣವನ್ನು ಬಯ
ಲಿಗೆಳೆದಿದ್ದೇ ವಾಜೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಶಿವಸೇನಾ ಬೆಂಬಲ: ಬಿಜೆಪಿ ಕಿಡಿ

ಸಚಿನ್‌ ವಾಜೆ ಪರ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಶಿವಸೇನಾ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಕಿಡಿಕಾರಿದ್ದಾರೆ. ‘ಇದೊಂದು ದೊಡ್ಡ ಸಂಚು. ಸಚಿನ್‌ ವಾಜೆ ಬಂಧಿಸಿರುವುದು ತನಿಖೆಯ ಮೊದಲ ಹಂತ. ಪೊಲೀಸ್‌ ಪಡೆಯಲ್ಲಿದ್ದವರೇ ಈ ರೀತಿ ಕಾರ್ಯನಿರ್ವಹಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವವರು ಯಾರು? ವಾಜೆ ಅವರಿಗೆ ಸರ್ಕಾರ ಆಶ್ರಯ ನೀಡಿದೆ. ಎನ್‌ಐಎ ಬಳಿ ಸಾಕ್ಷ್ಯಗಳಿರುವುದರಿಂದ ಬಂಧಿಸಿದೆ’ ಎಂದು ಹೇಳಿದ್ದಾರೆ. ‘ನಾನು ಮುಖ್ಯಮಂತ್ರಿಯಾಗಿದ್ದಾಗ ಗೃಹ ಖಾತೆಯನ್ನು ಹೊಂದಿದ್ದೆ. ಅಮಾನತುಗೊಂಡಿದ್ದ ವಾಜೆ ಅವರನ್ನು ಮರುನೇಮಿಸಬೇಕು ಎಂದು ಶಿವಸೇನಾ ನಾಯಕರು ಒತ್ತಾಯಿಸಿದ್ದರು. ಆಗ ಅಡ್ವೋಕೆಟ್‌ ಜನರಲ್‌ ಅವರ ಸಲಹೆ ಪಡೆದು ಮರು ನೇಮಕ ಮಾಡಲಿಲ್ಲ. ವಾಜೆ ವಿರುದ್ಧ ಪ್ರಕರಣ ಬಾಂಬೆ ಹೈಕೋರ್ಟ್‌ನಲ್ಲಿದೆ’ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಆಡಳಿತ ಹೇರಲು ಒತ್ತಾಯ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ನಾರಾಯಣ ರಾಣೆ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

ದೊಡ್ಡ ಸಂಚು: ಕಂಗನಾ

ಸಚಿನ್‌ ವಾಜೆ ಬಂಧನದ ಹಿನ್ನೆಲೆಯಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಧೋರಣೆಯನ್ನು ನಟಿ ಕಂಗನಾ ರನೌತ್ ಟೀಕಿಸಿದ್ದಾರೆ.

‘ದೊಡ್ಡ ಸಂಚು ನಡೆದಿದೆ. ಈ ಪೊಲೀಸ್‌ ಅಧಿಕಾರಿ ಅಮಾನತುಗೊಂಡಿದ್ದರು. ಆದರೆ, ಶಿವಸೇನಾ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಯಿತು’ ಎಂದು ಟೀಕಿಸಿದ್ದಾರೆ.

‘ಸಮರ್ಪಕವಾದ ತನಿಖೆ ನಡೆದರೆ ಹುದುಗಿಕೊಂಡಿರುವ ಎಲ್ಲ ಮಾಹಿತಿಯೂ ಹೊರಬರಲಿದೆ. ಮಹಾರಾಷ್ಟ್ರ ಸರ್ಕಾರವೂ ಪತನಗೊಳ್ಳಲಿದೆ. ನನ್ನ ವಿರುದ್ಧ 200ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಬಹುದು. ಜೈ ಹಿಂದ್‌’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

* ವಾಜೆ ಬಂಧನದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ. ಇದು ಸ್ಥಳೀಯ ವಿಷಯವಾಗಿದೆ.

- ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

* ಸತ್ಯದ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು. ಎನ್‌ಐಎ ಮತ್ತು ಎಟಿಎಸ್‌ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿವೆ.

-ಅನಿಲ್‌ ದೇಶಮುಖ್‌, ಮಹಾರಾಷ್ಟ್ರ ಗೃಹ ಸಚಿವ

* ಸಮರ್ಪಕವಾದ ತನಿಖೆ ನಡೆದರೆ ಹುದುಗಿಕೊಂಡಿರುವ ಎಲ್ಲ ಮಾಹಿತಿಯೂ ಹೊರಬರಲಿದೆ. ಸರ್ಕಾರವೂ ಪತನಗೊಳ್ಳಲಿದೆ. ನನ್ನ ವಿರುದ್ಧ 200ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಬಹುದು

-ಕಂಗನಾ ರನೌತ್, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.