ADVERTISEMENT

ಶಿವಸೇನಾ ಮುಗಿಸಲು ಸಂಚು: ಉದ್ಧವ್ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:15 IST
Last Updated 31 ಜುಲೈ 2022, 20:15 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಸಂಜಯ ರಾವುತ್ ಅವರನ್ನುಜಾರಿ ನಿರ್ದೇಶನಾಲಯವು (ಇ.ಡಿ.) ವಶಕ್ಕೆ ಪಡೆದಿರುವ ಕ್ರಮವು, ಶಿವಸೇನಾ ಪಕ್ಷವನ್ನು ಮುಗಿಸುವ ಸಂಚಿನ ಭಾಗ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಆರೋಪಿಸಿದ್ದಾರೆ.

‘ಸಂಜಯ್‌ ರಾವುತ್ ಅವರನ್ನು ಇ.ಡಿ. ಬಂಧಿಸಬಹುದು. ಇದೆಂಥಾ ಸಂಚು? ಹಿಂದೂಗಳು ಹಾಗೂ ಮರಾಠಿಗರಿಗೆ ಪಕ್ಷ ಬಲ ತುಂಬುವ ಕೆಲಸ ಮಾಡಿದ್ದರೂ, ಸೇನಾವನ್ನು ನಾಶಪಡಿಸುವ ಸಂಚು ನಡೆಯುತ್ತಿದೆ’ ಎಂದು ಉದ್ಧವ್ ಹೇಳಿದ್ದಾರೆ. ‘ಪ್ರತಿಪಕ್ಷಗಳನ್ನು ಶತ್ರುಗಳ ರೀತಿಯಲ್ಲಿ ನೋಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ’ ಎಂಬುದನ್ನು ಉದ್ಧವ್ ನೆನಪಿಸಿದರು.

‘ರಾಜಕೀಯವಾಗಿ ಬೆಳೆಯಲು ಸಹಾಯ ಮಾಡಿದ ಪಕ್ಷವನ್ನು ತೊರೆದ ಕೆಲವರು ತಮ್ಮ ನಿಷ್ಠೆ ಬದಲಿಸಿದ್ದಾರೆ. ಎರಡು ವರ್ಷ ಜೈಲಿನಲ್ಲಿ ಕಳೆದಿದ್ದ ಆನಂದ್ ದಿಘೆ ಅವರು ನಿಷ್ಠೆ ಹೇಗಿರಬೇಕು ಎಂದು ಶಿವಸೈನಿಕರಿಗೆ ತೋರಿಸಿಕೊಟ್ಟಿದ್ದರು. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮುಂಬೈ ಹಾಗೂ ಮರಾಠಿಗರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಈ ಬಗ್ಗೆ ಜೀತದಾಳಾಗಿ ಬದಲಾಗಿರುವವರ ಪ್ರತಿಕ್ರಿಯೆ ಏನಿತ್ತು? ರಾಜ್ಯಪಾಲರ ಮಾತು ಒಪ್ಪುವುದಿಲ್ಲ ಎಂದಷ್ಟೇ ಹೇಳಿ ಸುಮ್ಮನಾದರು’ ಎಂದು ಶಿವಸೇನಾ ವಿರುದ್ಧ ಬಂಡಾಯವೆದ್ದು ಮುಖ್ಯಮಂತ್ರಿ ಆಗಿರುವ ಏಕನಾಥ ಶಿಂದೆ ಅವರನ್ನು ಉದ್ಧವ್ ಠಾಕ್ರೆ ತರಾಟೆಗೆ ತೆಗೆದುಕೊಂಡರು.

ADVERTISEMENT

ಏನೇನಾಯ್ತು?

*ಇ.ಡಿ. ವಾಹನಗಳನ್ನು ತಡೆಯಲು ಮುಂದಾದ ಶಿವಸೇನಾ ಕಾರ್ಯಕರ್ತರ ಯತ್ನಕ್ಕೆ ಸ್ಥಳೀಯ ಪೊಲೀಸರ ತಡೆ; ಪ್ರತಿಭಟನೆ ನಡೆಸಿದ ಕೆಲವರನ್ನು ವಶಕ್ಕೆ ಪಡೆದ ಪೊಲೀಸರು

*ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿನ ಇ.ಡಿ. ಕಚೇರಿಗೆ ತೆರಳುವ ಮಾರ್ಗದಲ್ಲಿ ಕೆಲ ಸಮಯ ವಾಹನ ಸಂಚಾರ ಬಂದ್ ಮಾಡಿದ್ದ ಪೊಲೀಸರು; ಈ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಬ್ಯಾರಿಕೇಡ್ ಅಳವಡಿಕೆ

*ರಾವುತ್ ನಿವಾಸದ ಸುತ್ತ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನೆ; ಇ.ಡಿ. ಕಚೇರಿಗೆ ತೆರಳುವಾಗ ವಾಹನದಲ್ಲಿ ಎದ್ದುನಿಂತು ಕೇಸರಿ ವಸ್ತ್ರ ಪ್ರದರ್ಶಿಸಿದರಾವುತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.