ಸಂಜಯ್ ರಾವುತ್
– ಪಿಟಿಐ ಚಿತ್ರ
ಮುಂಬೈ: ಪಾಲುದಾರ ಪಕ್ಷಗಳ ನಡುವೆ ಮಾತುಕತೆ ನಡೆಯದೇ ಹೋದರೆ ಮೈತ್ರಿ ಸಫಲವಾಗುವುದಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ತಮ್ಮ ಪಕ್ಷವು ಏಕಾಂಗಿಯಾಗಿ ಎದುರಿಸಲಿದೆ ಎಂದು ಹೇಳಿದ ಬಳಿಕ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಮೈತ್ರಿ ಪಕ್ಷಗಳ ನಡುವೆ ಸಂವಹನ ನಡೆಯುತ್ತಿರಬೇಕಾದರೆ, ಜವಾಬ್ದಾರಿಯುತ ನಾಯಕರ ನೇಮಕ ಅಗತ್ಯ. ಇಂಡಿಯಾ ಬಣದ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಮೈತ್ರಿ ಪಕ್ಷಗಳು ಪರಸ್ಪರ ಎದುರಾಳಿಗಳಾಗಿ ಚುನಾವಣೆ ಸ್ಪರ್ಧಿಸುವುದು ತಪ್ಪಲ್ಲ ಎಂದ ಅವರು, ಯಾವ ಪಕ್ಷವೂ ವಿಶ್ವಾಸದ್ರೋಹ ಎಸಗಬಾರದು ಎಂದಿದ್ದಾರೆ.
ದೇಶದ ರಾಜಕೀಯದಲ್ಲಿ ಮತ್ತಷ್ಟು ಉನ್ನತಿಗೇರುವುದು ಪ್ರತಿಯೊಂದು ಪಕ್ಷದ ಸಾಮೂಹಿಕ ಆಕಾಂಕ್ಷೆ. ಆದರೆ ಕಳೆದ ಕೆಲವು ದಿನಗಳಿಂದ, ನಮ್ಮ ಕೆಲವು ಮೈತ್ರಿ ಪಾಲುದಾರರು ಮಾತುಕತೆ ಮುಗಿದು ಹೋಗಿದೆ ಎನ್ನುವ ನಿಲುವು ತೆಗೆದುಕೊಂಡಂತಿದೆ. ಮಾತುಕತೆ ಇಲ್ಲದಿದ್ದರೆ, ಯಾವ ಮೈತ್ರಿಯೂ ಯಶಸ್ವಿಯಾಗಲಾಗದು ಎಂದು ಹೇಳಿದ್ದಾರೆ.
2019ರಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟ ಮುರಿದು ಬಿದ್ದಿದ್ದೇ ಮಾತುಕತೆ ಕೊರತೆಯಿಂದ ಎಂದು ಅವರು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ 30ರಷ್ಟು ಪಕ್ಷಗಳಿವೆ. ಈ ಪಕ್ಷಗಳ ನಡುವೆ ಸಂವಹನ ನಡೆಯಬೇಕಿದ್ದರೆ, ಜವಾಬ್ದಾರಿಯುತ ನಾಯಕರನ್ನು ನೇಮಕ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಷಯವನ್ನು ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಉದ್ಧವ್ ಠಾಕ್ರೆ ಪದೇ ಪದೇ ಉಲ್ಲೇಖಿಸುತ್ತಿದ್ದರು. ಇತರ ಪಕ್ಷಗಳ ಹಿರಿಯ ನಾಯಕರೂ ಇದನ್ನೂ ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.