ಅಪಘಾತದಲ್ಲಿ ಹೊತ್ತಿ ಉರಿದ ಬಸ್
– ಎಕ್ಸ್ ಚಿತ್ರ
ದುಬೈ: ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಲು ಜೆಡ್ಡಾದಲ್ಲಿರುವ ಭಾರತ ಕಾನ್ಸುಲೇಟ್ ಜನರಲ್ ಮದೀನಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪಿಸಿದೆ ಎಂದು ದೂತವಾಸ ಕಚೇರಿ ಮಂಗಳವಾರ ತಿಳಿಸಿದೆ.
ಸೋಮವಾರ ಮದೀನಾ ಸಮೀಪ ಬಸ್ ಹಾಗೂ ಇಂಧನ ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ತೆಲಂಗಾಣದ 42 ಸೇರಿದಂತೆ 44 ಮಂದಿ ಉಮ್ರಾ ಯಾತ್ರಿಕರು ಮೃತಪಟ್ಟಿದ್ದರು.
ಅಪಘಾತದಲ್ಲಿ ಬದುಕುಳಿದವರಲ್ಲಿ ಭಾರತದ ಓರ್ವ ಮಾತ್ರ ಇದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಮದೀನಾದಲ್ಲಿರುವ ಭಾರತದ ಹಜ್ ಯಾತ್ರಿಕರ ಕಚೇರಿಯಲ್ಲಿ ಈ ತಾತ್ಕಾಲಿಕ ಕಚೇರಿ ತೆರೆಯಲಾಗಿದೆ ಎಂದು ಕಾನ್ಸುಲೇಟ್ ಜನರಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅಪಘಾತದಲ್ಲಿ ಬದುಕುಳಿದು ಮದೀನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೋಯಬ್ ಮೊಹಮ್ಮದ್ ಅವರನ್ನು ಕಾನ್ಸಲ್ ಜನರಲ್ ಫಹದ್ ಅಹ್ಮದ್ ಖಾನ್ ಸೂರಿ ಭೇಟಿಯಾಗಿದ್ದಾರೆ ಎಂದು ದೂತವಾಸ ಕಚೇರಿ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.
‘ಗಾಯಾಳುವಿಗೆ ಲಭ್ಯ ಇರುವ ಎಲ್ಲಾ ಉತ್ತಮ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಲು ಕಾನ್ಸುಲೇಟ್ ಆಶಿಸುತ್ತದೆ’ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.