ADVERTISEMENT

Blue Drum Murder Case: ಊರು ಬಿಡಲು ನಿರ್ಧರಿಸಿದ ಆರೋಪಿ ಮುಸ್ಕಾನ್ ಕುಟುಂಬ

ಪಿಟಿಐ
Published 6 ನವೆಂಬರ್ 2025, 12:46 IST
Last Updated 6 ನವೆಂಬರ್ 2025, 12:46 IST
   

ಮೀರಟ್(ಉತ್ತರ ಪ್ರದೇಶ): ‘ಅಳಿಯ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಮಗಳು ಮುಸ್ಕಾನ್ ಜೈಲು ಸೇರಿದ ನಂತರ ನಮ್ಮ ಕುಟಂಬದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸಂಬಂಧಿಕರು, ಸಮಾಜ ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ’ ಎಂದು ಮುಸ್ಕಾನ್‌ ತಂದೆ ಪ್ರಮೋದ್ ರಸ್ತೋಗಿ ನೋವು ತೋಡಿಕೊಂಡಿದ್ದಾರೆ.

‘ಇಂತಹ ಪರಿಸ್ಥಿತಿಯಲ್ಲಿ ಈ ಪರಿಸರದಲ್ಲಿ ಬದುಕಲು ನಮಗೆ ಸಾಧ್ಯವಿಲ್ಲ. ಆ ಕಾರಣಕ್ಕೆ ಮನೆ ಮಾರಾಟ ಮಾಡಿ ದೂರ ಹೋಗಲು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಅವರ ಮನೆಯ ಗೇಟಿನಲ್ಲಿ ‘ಮನೆ ಮಾರಾಟಕ್ಕಿದೆ’ ಎಂಬ ಬೋರ್ಡ್‌ ಇದೀಗ ಎಲ್ಲರ ಗಮನ ಸೆಳೆದಿದೆ.

‘ಕೊಲೆ ಪ್ರಕರಣದ ನಂತರ ನಮ್ಮ ಆಭರಣ ಅಂಗಡಿಯಲ್ಲಿ ವ್ಯವಹಾರ ಇಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ. ಗ್ರಾಹಕರು ನನ್ನ ಅಂಗಡಿಯತ್ತ ಸುಳಿಯುತ್ತಿಲ್ಲ. ಕಿರಿಯ ಮಗಳು ಮನೆಯಲ್ಲಿ ಟ್ಯೂಷನ್‌ ಕೊಡುತ್ತಿದ್ದಳು. ಇದೀಗ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದರಿಂದ ಆ ಆದಾಯವು ನಿಂತಿದೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದೇ ವರ್ಷ ಮಾರ್ಚ್‌ 3ರಂದು ಸೌರಭ್ ರಜಪೂತ ಅವರ ಕೊಲೆ ನಡೆದಿತ್ತು. ಪ್ರಿಯತಮ ಸಾಹಿಲ್‌ ಶುಕ್ಲಾ ಜೊತೆ ಸೇರಿ ಪತಿಯನ್ನು ಕೊಂದಿರುವುದಾಗಿ ಮುಸ್ಕಾನ್‌ ಮನೆಯವರ ಬಳಿ ತಿಳಿಸಿದ್ದಳು. ಆಕೆಯ ಕುಟುಂಬ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.

ಸೌರಭ್‌ ಕೊಲೆ ಮಾಡಿ, ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ನೀಲಿ ಡ್ರಮ್‌ಗೆ ತುಂಬಿ ಸಿಮೆಂಟ್‌ನಿಂದ ಮುಚ್ಚಿದ್ದರು.

ಮಾರ್ಚ್ 19ರಂದು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಸದ್ಯ ಮೀರಠ್‌ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು, ಅಲ್ಲಿ ಮುಸ್ಕಾನ್‌ ಗರ್ಭಿಣಿಯಾಗಿದ್ದಾಳೆ.

ಏತನ್ಮಧ್ಯೆ, ಮಗುವಿನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಸೌರಭ್‌ ಕುಟುಂಬ ಒತ್ತಾಯಿಸಿದ್ದು, ಪರೀಕ್ಷೆಯಲ್ಲಿ ಮಗು ಸೌರಭ್‌ ಅವರದ್ದೇ ಎಂದು ಸಾಬೀತಾದರೆ ಮಾತ್ರ ಆ ಮಗುವನ್ನು ಸ್ವೀಕರಿಸುವುದಾಗಿ ತಿಳಿಸಿದೆ.

ಮಗಳ ಜೊತೆಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿರುವ ರಸ್ತೋಗಿ ಕುಟುಂಬ, ಜೈಲಿನಲ್ಲಿರುವ ಮಗಳನ್ನು ಭೇಟಿ ಮಾಡಲು ಬರುತ್ತಿಲ್ಲ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಸಾಹಿಲ್‌ನನ್ನು ನೋಡಲು ಅವನ ಸಹೋದರ ಮತ್ತು ಅಜ್ಜಿ ಬಂದು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.