ADVERTISEMENT

ಪಟ್ನಾ ಹೈಕೋರ್ಟ್‌ 'ಸಿಜೆ'ಯಾಗಿ ಕರ್ನಾಟಕ HC ನ್ಯಾ.ಪವನ್‌ಕುಮಾರ್‌ ಹೆಸರು ಶಿಫಾರಸು

ಪಿಟಿಐ
Published 11 ಸೆಪ್ಟೆಂಬರ್ 2025, 15:29 IST
Last Updated 11 ಸೆಪ್ಟೆಂಬರ್ 2025, 15:29 IST
.
.   

ನವದೆಹಲಿ: ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಪವನ್‌ಕುಮಾರ್‌ ಬಿ. ಬಜಂತ್ರಿ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ವಿಕ್ರಮ್‌ನಾಥ್‌ ಅವರನ್ನೊಳಗೊಂಡ ಕೊಲಿಜಿಯಂ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಇದಲ್ಲದೆ, ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮೆನ್‌ ಸೇನ್‌ ಹಾಗೂ ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ಸುಂದರ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ.

ADVERTISEMENT

ಬೆಂಗಳೂರಿನಲ್ಲಿ ಕಾನೂನು ಅಧ್ಯಯನ

ಬೆಂಗಳೂರು: ಪಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಲು ಶಿಪಾರಸ್ಸು ಮಾಡಲಾಗಿರುವ ಪವನ್ ಕುಮಾರ್ ಭೀಮಪ್ಪ ಭಜಂತ್ರಿ ಅವರು 1963ರ ಅಕ್ಟೋಬರ್ 23ರಂದು ಜನಿಸಿದರು.

ಬೆಂಗಳೂರಿನ ಎಸ್‌ಜೆಆರ್‌ಸಿ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ ಅವರು 1990ರಲ್ಲಿ ವಕೀಲರಾಗಿ ಸನ್ನದು ನೋಂದಣಿ ಮಾಡಿಸಿ ವೃತ್ತಿ ಆರಂಭಿಸಿದರು. 2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ಪಂಜಾಬ್‌–ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ಅವರು, ನಂತರದಲ್ಲಿ ಪಟ್ನಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ 2021ರ ಅ.20ರಂದು ವರ್ಗಾವಣೆಗೊಂಡಿದ್ದರು. 2025ರ ಅಕ್ಟೋಬರ್ 22ರಂದು ನಿವೃತ್ತಿ ಹೊಂದಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.