ADVERTISEMENT

ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಜುಬೈರ್‌ಗೆ ಸುಪ್ರೀಂನಿಂದ 5 ದಿನಗಳ ಮಧ್ಯಂತರ ಜಾಮೀನು

ಪಿಟಿಐ
Published 8 ಜುಲೈ 2022, 7:55 IST
Last Updated 8 ಜುಲೈ 2022, 7:55 IST
ಪೊಲೀಸರ ವಶದಲ್ಲಿರುವ ಜುಬೈರ್‌
ಪೊಲೀಸರ ವಶದಲ್ಲಿರುವ ಜುಬೈರ್‌   

ನವದೆಹಲಿ: ‘ಫ್ಯಾಕ್ಟ್‌ ಚೆಕ್‌’ ವೆಬ್‌ಸೈಟ್‌ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ವಿರುದ್ಧ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಐದು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಟ್ವೀಟ್‌ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಜುಬೈರ್‌ ಅವರನ್ನು ಬಂಧಿಸಲಾಗಿತ್ತು.

ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜುಬೇರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಾಹೇಶ್ವರಿ ಅವರಿದ್ದ ರಜಾಕಾಲದ ಪೀಠ, ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. ಪ್ರಕರಣವನ್ನು ಹೆಚ್ಚಿನ ವಿಚಾರಣೆಗಾಗಿ ಸಾಮಾನ್ಯ ಪೀಠಕ್ಕೆ ವರ್ಗಾಯಿಸಿತು.

ADVERTISEMENT

ಸದ್ಯ ಜುಬೈರ್‌ಗೆ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ, ದೆಹಲಿಯಲ್ಲಿ ಅವರು ಮತ್ತೊಂದು ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ.

ಮಧ್ಯಂತರ ಜಾಮೀನು ಆದೇಶವು ಸೀತಾಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ್ದಾಗಿದೆ. ದೆಹಲಿಯಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್‌ ಕೂಡ ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಏನನ್ನೂ ಪೋಸ್ಟ್ ಮಾಡದಂತೆ ಜುಬೈರ್ ಅವರನ್ನು ನಿರ್ಬಂಧಿಸಿದ ನ್ಯಾಯಪೀಠ, ದೆಹಲಿ ತೊರೆಯದಂತೆ ಸೂಚಿಸಿತು.

‘ಹಿಂದೂ ಶೇರ್ ಸೇನಾ’ ಸಂಘಟನೆಯ ಸೀತಾಪುರ ಜಿಲ್ಲಾಧ್ಯಕ್ಷ ಭಗವಾನ್ ಶರಣ್ ಎಂಬುವವರು ಜೂನ್ 1 ರಂದು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶದಲ್ಲಿ ಜುಬೈರ್ ವಿರುದ್ಧ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಟ್ವೀಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜುಬೈರ್ ಅವರನ್ನು ದೆಹಲಿ ಪೊಲೀಸರು ಜೂನ್ 27 ರಂದು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.