ADVERTISEMENT

ಸಿಬಿಐ ಕಚ್ಚಾಟ: ಸಿವಿಸಿ ಪರಿಶೀಲನೆ ಇಂದು

ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಪ್ರಕರಣ

ಪಿಟಿಐ
Published 11 ನವೆಂಬರ್ 2018, 17:56 IST
Last Updated 11 ನವೆಂಬರ್ 2018, 17:56 IST
   

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ನಡೆಸಿದ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪರಿಶೀಲಿಸಲಿದೆ.

ಅಲೋಕ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 26ರಂದು ಸುಪ್ರೀಂ ಕೋರ್ಟ್‌ ನಡೆಸಿತ್ತು. ಅಲೋಕ್ ವಿರುದ್ಧದ ಆರೋಪಗಳ ತನಿಖಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಸಿವಿಸಿಗೆ ಸೂಚಿಸಿತ್ತು.ತನಿಖೆಯ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ಅವರನ್ನು ನೇಮಿಸಿತ್ತು.

ಅಲೋಕ್‌ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ನಡುವಣ ಕಚ್ಚಾಟದಿಂದಾಗಿ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ರಜೆ ಮೇಲೆ ಕಳುಹಿಸಿತ್ತು.

ADVERTISEMENT

ಕೆ.ವಿ.ಚೌಧರಿ ನೇತೃತ್ವದ ಮೂವರು ಸದಸ್ಯರ ಸಿವಿಸಿ ತಂಡದ ಎದುರು ಹಾಜರಾಗಿಅಲೋಕ್‌ ಅವರು ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಅಲೋಕ್‌ ಅವರ ಅರ್ಜಿ ವಿಚಾರಣೆಯನ್ನು ಈ ಮೊದಲು ನಡೆಸಿತ್ತು. ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ದ್ವಿಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ.

ಅಸ್ತಾನಾ ಸೇರಿ ಸಿಬಿಐನ ವಿವಿಧ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಮತ್ತು ನ್ಯಾಯಾಲಯದ ಉಸ್ತುವಾರಿಯಲ್ಲಿ ಈ ತನಿಖೆ ನಡೆಯಬೇಕು ಎಂದುಕಾಮನ್‌ ಕಾಸ್‌ ಎನ್‌ಜಿಒ ಸಲ್ಲಿಸಿದ ಅರ್ಜಿಯನ್ನೂ ಪೀಠವು ವಿಚಾರಣೆಗೆ ಎತ್ತಿಕೊಂಡಿದೆ. ನವೆಂಬರ್ 12 ರೊಳಗೆ ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಸಿಬಿಐ, ಸಿವಿಸಿ, ಅಸ್ತಾನಾ, ಅಲೋಕ್‌ ಮತ್ತು ರಾವ್‌ ಅವರಿಗೆ ಪೀಠವು ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.