ADVERTISEMENT

ದೆಹಲಿ ವಿಧಾನಸಭೆ ಕಾರ್ಯದರ್ಶಿಗೆ ‘ಸುಪ್ರೀಂ’ ನೋಟಿಸ್‌

ಫೇಸ್‌ಬುಕ್‌ ಇಂಡಿಯಾ ಉಪಾಧ್ಯಕ್ಷರಾದ ಅಜಿತ್‌ ಮೋಹನ್‌ಗೆ ಸಮನ್ಸ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 16:16 IST
Last Updated 23 ಸೆಪ್ಟೆಂಬರ್ 2020, 16:16 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸಂಸ್ಥೆಯ ಉಪಾಧ್ಯಕ್ಷರಾದ ಅಜಿತ್‌ ಮೋಹನ್‌ ಅವರಿಗೆ ಸಮನ್ಸ್‌ ನೀಡಿರುವುದನ್ನು ಪ್ರಶ್ನಿಸಿಫೇಸ್‌ಬುಕ್‌ ಇಂಡಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ದೆಹಲಿ ವಿಧಾನಸಭೆ ಕಾರ್ಯದರ್ಶಿಯವರಿಗೆ ಬುಧವಾರ ನೋಟಿಸ್‌ ನೀಡಿದೆ.

ಕಳೆದ ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಫೇಸ್‌ಬುಕ್‌ ಕೂಡಾ ಶಾಮೀಲಾಗಿತ್ತು ಎನ್ನುವ ಆರೋಪದಡಿ ವಿಚಾರಣೆಗೆ ಹಾಜರಾಗಲು ಅಜಿತ್‌ ಮೋಹನ್‌ಗೆ ವಿಧಾನಸಭೆ ಕಾರ್ಯದರ್ಶಿಯವರು ಸೆ.18ರಂದು ಸೂಚಿಸಿದ್ದರು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ, ‘ಮಾತನಾಡುವಂತೆ ಅರ್ಜಿದಾರರ ಮೇಲೆ ಒತ್ತಡ ಹೇರಿದರೆ, ಸಂವಿಧಾನದ ವಿಧಿ 19 ಹಾಗೂ 21ರಡಿ ನೀಡಿರುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ವಾಕ್‌ಸ್ವಾಂತಂತ್ರ್ಯದಲ್ಲಿ ಮಾತನಾಡದೇ ಇರುವ ಹಕ್ಕನ್ನೂ ನೀಡಲಾಗಿದೆ’ ಎಂದರು.

ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಪರವಾಗಿ ವಾದಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ‘ಪ್ರಕರಣದಲ್ಲಿ ನ್ಯಾಯಾಲಯವು ತೀರ್ಪು ಪ್ರಕಟಿಸುವವರೆಗೂ ಯಾವುದೇ ನಿರ್ಬಂಧದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರಿದ್ದ ಪೀಠಕ್ಕೆ ತಿಳಿಸಿದರು. ಜೊತೆಗೆ ‘ಫೇಸ್‌ಬುಕ್‌ ಅಧಿಕಾರಿಗೆ ಸಾಕ್ಷಿದಾರರಾಗಿ ನೋಟಿಸ್‌ ನೀಡಲಾಗಿದೆಯೇ ವಿನಃ ಆರೋಪಿಯಾಗಿ ಅಲ್ಲ’ ಎಂದು ಸಿಂಘ್ವಿ ಪೀಠಕ್ಕೆ ಸ್ಪಷ್ಟನೆ ನೀಡಿದರು.

ADVERTISEMENT

ತಮ್ಮ ನಿಲುವಿನ ಕುರಿತು ಸ್ಪಷ್ಟನೆಯನ್ನು ಅಫಿಡಾವಿಟ್‌ ಮುಖಾಂತರ ಒಂದು ವಾರದೊಳಗೆ ಸಲ್ಲಿಸಲು ಸಿಂಘ್ವಿ ಅವರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಅ.15ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.