ADVERTISEMENT

ಸುರಕ್ಷಾ ನಿಯಮಗಳ ಉಲ್ಲಂಘನೆ: ನೋಯ್ಡಾದಲ್ಲಿ ಅವಳಿ ಕಟ್ಟಡ ಕೆಡವಲು ‘ಸುಪ್ರೀಂ’ ಆದೇಶ

ಪಿಟಿಐ
Published 31 ಆಗಸ್ಟ್ 2021, 19:31 IST
Last Updated 31 ಆಗಸ್ಟ್ 2021, 19:31 IST
ನೋಯ್ದಾದಲ್ಲಿ ನಿರ್ಮಿಸಲಾಗಿರುವ 40 ಅಂತಸ್ತಿನ ಅವಳಿ ಕಟ್ಟಡ ಪಿಟಿಐ ಚಿತ್ರ
ನೋಯ್ದಾದಲ್ಲಿ ನಿರ್ಮಿಸಲಾಗಿರುವ 40 ಅಂತಸ್ತಿನ ಅವಳಿ ಕಟ್ಟಡ ಪಿಟಿಐ ಚಿತ್ರ   

ನವದೆಹಲಿ: ನೋಯ್ಡಾದಲ್ಲಿ ಸೂಪರ್‌ಟೆಕ್ ಬಿಲ್ಡರ್ಸ್ ನಿರ್ಮಾಣ ಮಾಡಿದ್ದ 40 ಅಂತಸ್ತುಗಳ ಅವಳಿ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿ ಮತ್ತು ನೆರೆಯ ನಿವಾಸಿಗಳಿಗೆ ಬೆಳಕು ಬೀಳುವುದನ್ನು ತಡೆಯುವಂತೆ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಈ ಕಟ್ಟಡಗಳನ್ನು ಕೆಡವಲು ಆದೇಶ ನೀಡಲಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿನ ಫ್ಲ್ಯಾಟ್‌ಗಳಿಗೆ ಬೆಳಕು ಬಾರದಂತೆ ಮತ್ತು ಗಾಳಿ ಆಡದಂತೆ ಕಟ್ಟಡಗಳನ್ನು ವಿನ್ಯಾಸ ಮಡಲಾಗಿತ್ತು. ಅಲ್ಲದೆ, ಅಗ್ನಿಶಾಮಕ ದಳದ ನಿರಾಕ್ಷೇಪಣಾ ಪತ್ರವನ್ನೂ ಈ ಕಟ್ಟಡಗಳಿಗೆ ಪಡೆದಿರಲಿಲ್ಲ. ಈ ಎಲ್ಲಾ ಅಕ್ರಮಗಳ ವಿರುದ್ಧ ಫ್ಲ್ಯಾಟ್‌ ಬುಕ್ಕಿಂಗ್ ಮಾಡಿದ್ದವರು, ಖರೀದಿಸಿದ್ದವರು 2012ರಲ್ಲಿ ಅಲಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕಟ್ಟಡಗಳನ್ನು ಕೆಡವಿ ಮತ್ತು ಫ್ಲ್ಯಾಟ್ ಕಾಯ್ದಿರಿಸಿದ್ದವರಿಗೆ ಅವರ ಹಣವನ್ನು ವಾರ್ಷಿಕ ಶೇ 12ರಷ್ಟು ಬಡ್ಡಿ ಸಮೇತ ವಾಪಸ್ ಮಾಡಿ ಎಂದು 2014ರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಸೂಪರ್‌ಟೆಕ್ ಬಿಲ್ಡರ್ಸ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ADVERTISEMENT

ಸೂಪರ್‌ಟೆಕ್ ಬಿಲ್ಡರ್ಸ್ ಮತ್ತು ಖರೀದಿದಾರರ ವಾದವನ್ನು ಆಲಿಸಿದ ಪೀಠವು, ಅಲಹಾಬಾದ್ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದೆ.

‘ಈ ಪ್ರಕರಣವು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಅಕ್ರಮವನ್ನು ಬಯಲಿಗೆಳೆದಿದೆ. ಅಧಿಕಾರಿಗಳು ಮತ್ತು ಬಿಲ್ಡರ್‌ಗಳು ಗೊತ್ತಿದ್ದೂ, ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಸಾಲುಸಾಲು ಅಕ್ರಮ ಎಸಗಲಾಗಿದೆ. ಅಗ್ನಿಶಾಮಕ ದಳವು ಆಕ್ಷೇಪ ವ್ಯಕ್ತಪಡಿಸಿದ್ದರೂ, ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅದನ್ನು ಕಡೆಗಣಿಸಿದ್ದಾರೆ. ಇಂತಹ ಅಪವಿತ್ರ ಮೈತ್ರಿಯ ಕಾರಣ ಇತರರು ಸಮಸ್ಯೆ ಎದುರಿಸಬೇಕಾಗಿದೆ’ ಎಂದು ಸುಪ್ರೀಂ ಕೋರ್ಟ್ ಪೀಠವು ಅಭಿಪ್ರಾಯಪಟ್ಟಿದೆ.

‘ಇಂತಹ ಅಕ್ರಮದ ವಿರುದ್ಧ ಕೆಲವರಷ್ಟೇ ದನಿ ಎತ್ತುತ್ತಾರೆ. ಆದರೆ ಅವರು ಇಂತಹವರ ವಿರುದ್ಧ ದೀರ್ಘಕಾಲ ಹೋರಾಡಬೇಕಾಗುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

‘ಮುಂದಿನ ಮೂರು ತಿಂಗಳ ಒಳಗೆ ಕಟ್ಟಡ ಕೆಡವುವ ಕಾರ್ಯವನ್ನು ಪೂರ್ಣಗೊಳಿಸಬೇಕು. ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲೇ ಕೆಡವುವ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಪೀಠವು ಆದೇಶಿಸಿದೆ.

ಖರೀದಿದಾರರ ನಿಟ್ಟುಸಿರು
ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಸೂಪರ್‌ಟೆಕ್ ಬಿಲ್ಡರ್ಸ್‌ನ ಅವಳಿ ಕಟ್ಟಡಗಳ ಫ್ಲ್ಯಾಟ್ ಖರೀದಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಫ್ಲ್ಯಾಟ್ ಖರೀದಿಗೆ ಮುಂಗಡ ನೀಡಿದ್ದವರಿಗೆ, ವಾರ್ಷಿಕ ಶೇ 12ರಷ್ಟು ಬಡ್ಡಿಯ ಜತೆಗೆ ಪೂರ್ಣ ಹಣವನ್ನು ಹಿಂತಿರುಗಿಸಬೇಕು. ನೆರೆಯ ಕಾಲೊನಿಗಳ ನಿವಾಸಿಗಳಿಗೆ ₹2 ಕೋಟಿ ಪರಿಹಾರ ನೀಡಬೇಕು ಎಂದು ಪೀಠವು ಆದೇಶಿಸಿದೆ.

633 ಜನರು ಫ್ಲ್ಯಾಟ್‌ಗಳನ್ನು ಖರೀದಿಸಿದ್ದು, ಅವರಲ್ಲಿ 133 ಮಂದಿ ಖರೀದಿ ರದ್ದು ಮಾಡಿದ್ದಾರೆ. 248 ಜನರಿಗೆ ಈಗಾಗಲೇ ಹಣ ವಾಪಸ್ ಮಾಡಲಾಗಿದೆ. 252 ಜನರಿಗೆ ಇನ್ನಷ್ಟೇ ಹಣ ವಾಪಸ್ ಮಾಡಬೇಕಿದೆ.

*
ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯ ಫಲವನ್ನು ಅಮಾಯಕ ಖರೀದಿದಾರರು ಅನುಭವಿಸಬೇಕಿದೆ.
-ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.