ADVERTISEMENT

‘ಎಸ್‌ಐಟಿ ತಾನಾಗಿಯೇ ತನಿಖೆ ದಿಕ್ಕನ್ನು ತಪ್ಪಿಸಿದೆ’: ‘ಸುಪ್ರೀಂ’ ಚಾಟಿ

ಅಶೋಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮಹಮೂದಾಬಾದ್ ವಿರುದ್ಧದ ಪ್ರಕರಣ

ಪಿಟಿಐ
Published 16 ಜುಲೈ 2025, 15:40 IST
Last Updated 16 ಜುಲೈ 2025, 15:40 IST
–
   

ನವದೆಹಲಿ: ಅಶೋಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಲಿ ಖಾನ್‌ ಮಹಮೂದಾಬಾದ್‌ ವಿರುದ್ಧ ನಡೆಯುತ್ತಿರುವ ತನಿಖೆಯು ದಾರಿ ತಪ್ಪಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

‘ಪ್ರಕರಣ ಕುರಿತು ತನಿಖೆ ನಡೆಸುವುದಕ್ಕೆ ತನ್ನ ನಿರ್ದೇಶನದ ಪ್ರಕಾರ ಎಸ್‌ಐಟಿ ರಚಿಸಲಾಗಿದೆ. ಆದರೆ, ಸ್ವತಃ ಎಸ್‌ಐಟಿಯೇ ತನಿಖೆಯ ದಿಕ್ಕನ್ನು ಬದಲಿಸಿದೆ’ ಎಂದು ಹೇಳಿದೆ.

ಅರ್ಜಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯಮಾಲ್ಯಾ ಬಾಗ್ಚಿ ಅವರು ಇದ್ದ ನ್ಯಾಯಪೀಠ, ‘ತನಿಖೆ ನಡೆಸುವುದಕ್ಕೆ ನಿಮಗೆ ಅವರ (ಅಲಿ ಖಾನ್‌ ಮಹಮೂದಾಬಾದ್‌) ಅಗತ್ಯ ಇಲ್ಲ, ನಿಮಗೆ ನಿಘಂಟುವೊಂದರ ಅವಶ್ಯಕತೆ ಇದೆ’ ಎಂದು ಕುಟುಕಿದೆ.

ADVERTISEMENT

ವಿಚಾರಣೆಗೆ ಹಾಜರಾಗುವಂತೆ ಅಲಿ ಖಾನ್‌ ಅವರಿಗೆ ಇನ್ನು ಮುಂದೆ ಸಮನ್ಸ್‌ ಜಾರಿಗೊಳಿಸಬಾರದು. ಅಪರಾಧ ಎಸಗಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ, ನಾಲ್ಕು ವಾರಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಎಸ್‌ಐಟಿಗೆ ನಿರ್ದೇಶನ ನೀಡಿತು.

ಆಪರೇಷನ್‌ ಸಿಂಧೂರ ಕುರಿತು ಅಲಿ ಖಾನ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗಳಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ್ದಾರೆ ಎನ್ನಲಾದ ವಿವಾದಾತ್ಮಕ ಪೋಸ್ಟ್‌ಗಳಿಗೆ ಸಂಬಂಧಿಸಿ ಪ್ರಾಧ್ಯಾಪಕ ಅಲಿ ಖಾನ್‌ ವಿರುದ್ಧದ ಎರಡು ಎಫ್‌ಐಆರ್‌ಗಳಿಗೆ ಸೀಮಿತವಾಗಿ ತನಿಖೆ ನಡೆಸಬೇಕು’ ಎಂದು ಎಸ್‌ಐಟಿ ಮುಖ್ಯಸ್ಥರಾದ ಹರಿಯಾಣದ ಹಿರಿಯ ಪೊಲೀಸ್‌ ಅಧಿಕಾರಿಗೆ ನ್ಯಾಯಪೀಠ ಸೂಚಿಸಿತು.

ವಿಚಾರಣೆ ವೇಳೆ, ‘ಎಸ್‌ಐಟಿ ಸ್ವತಃ ತನಿಖೆಯ ದಿಕ್ಕನ್ನೇ ಏಕೆ ಬದಲಿಸಿತು ಎಂಬುದು ನಮ್ಮ ಪ್ರಶ್ನೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗಿರುವ ಪೋಸ್ಟ್‌ಗಳ ವಿಷಯವಸ್ತು ಕುರಿತು ಎಸ್‌ಐಟಿ ತನಿಖೆ ಮಾಡಬೇಕು’ ಎಂದು ನ್ಯಾಯಪೀಠ ಹೇಳಿತು.

ರಾಜ್ಯ ಸರ್ಕಾರ ಪರ ಹಾಜರಿದ್ದ ವಕೀಲ,‘ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ತನಿಖೆಯ ಯಾವುದೇ ಹಂತದಲ್ಲಿ ಪ್ರಾಧ್ಯಾಪಕ ಅಲಿ ಖಾನ್‌ ಅವರಿಗೆ ಸಮನ್ಸ್‌ ನೀಡಬಹುದೇ?’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತನಿಖೆ ನಡೆಸುವುದಕ್ಕೆ ನಿಮಗೆ ಅವರ ಅಗತ್ಯ ಇಲ್ಲ. ಒಂದು ನಿಘಂಟಿನ ಅವಶ್ಯಕತೆ ಇದೆ’ ಎಂದು ಹೇಳಿತು.

ಪ್ರಾಧ್ಯಾಪಕ ಅಲಿ ಖಾನ್‌ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.