ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುವ ವೇಳೆ ವಿನಾಯಕ ದಾಮೋದರ ಸಾವರ್ಕರ್ ಕುರಿತು ‘ಬೇಜವಾಬ್ದಾರಿ’ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಶುಕ್ರವಾರ ತಡೆ ನೀಡಿದೆ.
ಉತ್ತರ ಪ್ರದೇಶ ಸರ್ಕಾರ ಹಾಗೂ ದೂರುದಾರರಾದ ವಕೀಲ ನೃಪೇಂದ್ರ ಪಾಂಡೆ ಅವರಿಗೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, ರಾಹುಲ್ ಗಾಂಧಿ ವಿರುದ್ಧದ ಸಮನ್ಸ್ ರದ್ದು ಮಾಡಲು ನಿರಾಕರಿಸಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಮನಮೋಹನ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ‘ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಣಕಿಸುವುದು ಸಲ್ಲ. ಬ್ರಿಟಿಷರಿಗೆ ಬರೆದ ಪತ್ರಗಳಲ್ಲಿ ಮಹಾತ್ಮ ಗಾಂಧಿ ಅವರು ಕೂಡ ‘ನಿಮ್ಮ ವಿಶ್ವಾಸಾರ್ಹ ಸೇವಕ’ ಎಂಬ ಪದಗಳನ್ನು ಬಳಸಿದ್ದರು ಎಂಬುದು ನಿಮ್ಮ ಕಕ್ಷಿದಾರರಿಗೆ ತಿಳಿದಿದೆಯೇ’ ಎಂದು ರಾಹುಲ್ ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಪೀಠ ಪ್ರಶ್ನಿಸಿತು.
‘ವೈರತ್ವ ಬೆಳೆಸಲು ಯತ್ನ ಹಾಗೂ ಸಾರ್ವಜನಿಕವಾಗಿ ಕೆಟ್ಟ ನಡವಳಿಕೆಯಂತಹ ಆರೋಪಗಳನ್ನು ರಾಹುಲ್ ಗಾಂಧಿ ವಿರುದ್ಧ ಹೊರಿಸಲಾಗಿಲ್ಲ. ಜನರ ಗುಂಪುಗಳ ಮಧ್ಯೆ ವೈರತ್ವ ಬೆಳೆಸುವುದು ರಾಹುಲ್ ಗಾಂಧಿ ಉದ್ದೇಶವೂ ಆಗಿರಲಿಲ್ಲ’ ಎಂದು ಸಿಂಘ್ವಿ ಅವರು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನೀವು ಬಹಳ ಗೌರವಾನ್ವಿತ ವ್ಯಕ್ತಿಯಾಗಿದ್ದೀರಿ. ಮಹಾತ್ಮ ಗಾಂಧಿ ಅವರು ಬ್ರಿಟಿಷ್ ವೈಸರಾಯ್ ಅವರಿಗೆ ಬರೆದ ಪತ್ರಗಳಲ್ಲಿ ‘ನಿಮ್ಮ ಆಜ್ಞಾಧಾರಕ ಸೇವಕ’ ಎಂದು ಬರೆದಿದ್ದರು ಎಂಬುದು ನಿಮ್ಮ ಕಕ್ಷಿದಾರರಿಗೆ ಗೊತ್ತಿದೆಯೇ. ಇಂತಹ ಪದಗಳನ್ನು ಬಳಸಿದ್ದಾರೆ ಎಂಬ ಕಾರಣಕ್ಕೆ ಗಾಂಧೀಜಿ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯಲು ಸಾಧ್ಯವೇ?’ ಎಂದು ಹೇಳಿತು.
‘ಈ ಹಿಂದೆ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಬರೆದ ಪತ್ರಗಳಲ್ಲಿ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ‘ನಿಮ್ಮ ಸೇವಕ’ ಎಂಬ ಪದಗಳನ್ನು ಬಳಸುತ್ತಿದ್ದುದನ್ನು ನಾವು ನೋಡಿದ್ದೇವೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.
‘ಭಾರತದ ಇತಿಹಾಸದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದಾಗ ನೀವು ಇಂತಹ ಹೇಳಿಕೆಗಳನ್ನು ನೀಡಬಾರದು. ರಾಜಕೀಯ ಪಕ್ಷವೊಂದರ ನಾಯಕರಾಗಿರುವ ರಾಹುಲ್ ಗಾಂಧಿ ಏಕೆ ಇಂತಹ ಹೇಳಿಕೆ ನೀಡಬೇಕು. ಮಹಾರಾಷ್ಟ್ರಕ್ಕೆ ಹೋಗಿ ನೋಡಿ, ಅಲ್ಲಿನ ಜನರು ಸಾವರ್ಕರ್ ಅವರನ್ನು ಪೂಜಿಸುತ್ತಾರೆ. ಇಂತಹ ಕೆಲಸ ಮಾಡಬೇಡಿ’ ಎಂದು ಪೀಠ ಹೇಳಿತು.
‘ನಿಮ್ಮ ಕಕ್ಷಿದಾರರ ಅಜ್ಜಿ (ಇಂದಿರಾ ಗಾಂಧಿ) ಪ್ರಧಾನಿಯಾಗಿದ್ದಾಗ, ಸಾವರ್ಕರ್ ಅವರನ್ನು ಹೊಗಳಿ ಪತ್ರ ಬರೆದಿದ್ದರು. ಈ ವಿಷಯ ನಿಮ್ಮ ಕಕ್ಷಿದಾರರಿಗೆ ತಿಳಿದಿದೆಯೇ?’ ಎಂದು ನ್ಯಾಯಮೂರ್ತಿ ದತ್ತ ಅವರು ಸಿಂಘ್ವಿ ಉದ್ದೇಶಿಸಿ ಕೇಳಿದರು.
‘ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಬೇಡ. ಅವರ ವಿರುದ್ಧ ನೀವು ಹೇಳಿದಂತಹ ಆರೋಪಗಳನ್ನು ಹೊರಿಸಿಲ್ಲ. ಹೀಗಾಗಿ ಸಮನ್ಸ್‌ಗೆ ತಡೆ ನೀಡಬಹುದಾದಂತಹ ಪ್ರಕರಣ ಇದು’ ಎಂದೂ ಹೇಳಿದರು.
‘ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮತ್ತೆ ಇಂತಹ ಹೇಳಿಕೆಗಳು ಬೇಡ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರಿಂದ ಏನಾದರೂ ಇಂತಹ ಹೇಳಿಕೆಗಳು ಹೊರಬಿದ್ದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು. ಅವರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ಕುರಿತು ನಾವು ಹೀಗೆ ನಡೆದುಕೊಳ್ಳುವುದು ಸರಿಯೇ’ ಎಂದು ಪ್ರಶ್ನಿಸಿದ ಪೀಠ, ‘ಇಂತಹ ನಡೆ ಸರಿಯಲ್ಲ’ ಎಂದು ಹೇಳಿತು.
ಭಾರತ ಜೋಡೊ ಯಾತ್ರೆ ವೇಳೆ, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ 2022ರ ನವೆಂಬರ್ 17ರಂದು ರಾಹುಲ್ ಗಾಂಧಿ ಅವರು ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗಳ ವಿರುದ್ಧ ದೂರು ದಾಖಲಾಗಿದೆ.
ಈ ಕುರಿತು ವಿಚಾರಣಾ ನ್ಯಾಯಾಲಯ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಅಲಹಾಬಾದ್‌ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.