ಸುಪ್ರೀಂ ಕೋರ್ಟ್
ನವದೆಹಲಿ: ಪೂಜಾ ಸ್ಥಳಗಳ(ವಿಶೇಷ ಅವಕಾಶಗಳು) ಕಾಯ್ದೆ–1991ರ ಸೆಕ್ಷನ್ 4(2)ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಹೊಸ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿತು.
‘ಕಾಯ್ದೆಯಲ್ಲಿನ ಹಲವು ಅವಕಾಶಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಬಾಕಿ ಇದೆ. ಈ ಅರ್ಜಿಗಳ ಜೊತೆಗೆ ನಾನು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯನ್ನೂ ನಡೆಸಬೇಕು’ ಎಂದು ಕಾನೂನು ವಿದ್ಯಾರ್ಥಿ ನಿತಿನ್ ಉಪಾಧ್ಯಾಯ ಕೋರಿದ್ದರು.
‘ಸಂವಿಧಾನದ 32ನೇ ವಿಧಿ ಅಡಿ, ಈ ವಿಚಾರವಾಗಿ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆ ನಡೆಸುವುದಕ್ಕೆ ನಾವು ಸಿದ್ಧ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇದ್ದ ನ್ಯಾಯಪೀಠ, ಅರ್ಜಿದಾರ ನಿತಿನ್ ಉದ್ದೇಶಿಸಿ ಹೇಳಿತು.
ವಿಚಾರಣೆಗೆ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಿಸಿ, ಮಧ್ಯಂತರ ಅರ್ಜಿ ಸಲ್ಲಿಸಲು ನಿತಿನ್ ಅವರಿಗೆ ನ್ಯಾಯಪೀಠ ಅನುಮತಿ ನೀಡಿತು.
ಈ ಕಾಯ್ದೆಯು, 1947ರ ಆಗಸ್ಟ್ 15ರಂದು ಇರುವಂತೆ, ಯಾವುದೇ ಪೂಜಾ ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುತ್ತದೆ. ಆದರೆ, ರಾಮ ಜನ್ಮಭೂಮಿ–ಬಾಬ್ರಿ ಮಸೀದಿಗೆ ಸಂಬಂಧಿಸಿದ ವಿವಾದವನ್ನು ಈ ಕಾಯ್ದೆಯಿಂದ ಹೊರಗಿಡಲಾಗಿತ್ತು.
ಅಲ್ಲದೇ, ಕಾಯ್ದೆಯ ಸೆಕ್ಷನ್ 4(2), ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುವ ಜೊತೆಗೆ, ಈ ಅವಕಾಶ ಪ್ರಶ್ನಿಸಿ ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಸಹ ನಿಷೇಧಿಸುತ್ತದೆ.
ಹೀಗಾಗಿ, ಕಾಯ್ದೆಯ ವಿವಿಧ ಸೆಕ್ಷನ್‌ಗಳ ಸಿಂಧುತ್ವ ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವುದು ಸೇರಿ 6ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.