ADVERTISEMENT

ಎನ್‌ಆರ್‌ಐ ಗಂಡಂದಿರಿಂದ ಕಿರುಕುಳ: ವಿಚಾರಣೆಗೆ ‘ಸುಪ್ರೀಂ‌’ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 12:09 IST
Last Updated 22 ಮಾರ್ಚ್ 2021, 12:09 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವರದಕ್ಷಿಣೆಗಾಗಿ ಹೆಂಡತಿಯರನ್ನು ಪೀಡಿಸಿದ ಅನಿವಾಸಿ ಭಾರತೀಯ (ಎನ್ಆರ್‌ಐ) ಗಂಡಂದಿರ ಬಂಧನಕ್ಕೆ ಸಂಬಂಧಿಸಿದ ಪ್ರಕರಣಗಳ ಅರ್ಜಿಗಳ ವಿಚಾರಣೆಗಳನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ಮಹಿಳಾ ಅರ್ಜಿದಾರರ ಪರವಾಗಿರುವ ಹಿರಿಯ ವಕೀಲ ಕೊಲೆನ್ ಗೋನ್ಸಾಲ್ವಿಸ್ ಅವರಿಗೆ ಪ್ರಕರಣಗಳ ಕುರಿತು ಮಾಹಿತಿ ನೀಡಿದೆ.

ಮಹಿಳಾ ಅರ್ಜಿದಾರರ ಗುಂಪು ಪ್ರಕರಣಕ್ಕೆ ಸಂಬಂಧಿಸಿದಂತೆ ಮನವಿಯನ್ನು ಪೂರ್ಣಗೊಳಿಸಿದ್ದು, ನ್ಯಾಯಾಲಯದಲ್ಲಿ ವಾದಿಸಲು ಸಿದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲ ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಈ ಪ್ರಕರಣಗಳ ವಿಚಾರಣೆಯನ್ನು ಜುಲೈ ತಿಂಗಳಿನಲ್ಲಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಜಿಒ ಪ್ರವಾಸಿ ಲೀಗಲ್ ಸೆಲ್ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ವಾದಿಸುತ್ತಿದ್ದು, ಈ ಸಂಬಂಧ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ ಈ ಬಗ್ಗೆ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಗೆ ಹಾಜರಾದ ವಕೀಲರು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.

ಎನ್ಆರ್‌ಐ ಗಂಡಂದಿರಿಂದ ವರದಕ್ಷಿಣಿಗೆ ಕಿರುಕುಳಕ್ಕೊಳಗಾಗಿರುವ ಮಹಿಳೆಯರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕು ಮತ್ತು ನ್ಯಾಯಾಲಯದಲ್ಲಿ ಹೋರಾಡಲು ಭಾರತೀಯ ದೂತಾವಾಸ ಕಚೇರಿಯ ಸಹಾಯ ಅಗತ್ಯವಾಗಿ ಬೇಕಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗುತ್ತಿರುವ ಆರೋಪಿಗಳ ವಿರುದ್ಧ ತಕ್ಷಣವೇ ಸುತ್ತೋಲೆ ಹೊರಡಿಸಬೇಕೆಂದೂ ಮಹಿಳೆಯರ ಗುಂಪು ಕೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.