ADVERTISEMENT

ನೀಟ್‌–ಯುಜಿ ಮರು ಪರೀಕ್ಷೆ | ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 23:40 IST
Last Updated 7 ಜುಲೈ 2024, 23:40 IST
ನೀಟ್‌
ನೀಟ್‌   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌-ಯುಜಿ) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ಆರಂಭಿಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ, ಮನೋಜ್‌ ಮಿಶ್ರಾ ನೇತೃತ್ವದ ನ್ಯಾಯಪೀಠವು ಮೂರು ಡಜನ್‌ಗೂ ಅಧಿಕ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ನೀಟ್‌ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಜೂನ್‌ 23ರಂದು ಸಿಬಿಐ ತನಿಖೆ ಆರಂಭಿಸಿದ್ದು, ಪ್ರಕರಣ ಸಂಬಂಧ ಹಲವರನ್ನು ಬಂಧಿಸಿದೆ. ವಿವಾದದ ನಂತರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಪಾರದರ್ಶಕ, ಸುಗಮ, ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್‌, ಐಐಟಿ ಕಾನ್ಪುರದ ಬೋರ್ಡ್‌ ನಿರ್ದೇಶಕರನ್ನು ಒಳಗೊಂಡ ತಜ್ಞರ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.

ADVERTISEMENT

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಮೇ 5ರಂದು ನೀಟ್‌–ಯುಜಿ ಪರೀಕ್ಷೆ ನಡೆಸಿದ್ದು, ಜೂನ್‌ 6ರಂದು ಫಲಿತಾಂಶ ಪ್ರಕಟಿಸಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಿದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸುಪ್ರೀಂಕೋರ್ಟ್‌ಗೆ ಎನ್‌ಟಿಎ, ಕೇಂದ್ರ ಸರ್ಕಾರವು ಪ್ರತ್ಯೇಕ ಅಫಿಡವಿಟ್‌ಗಳನ್ನು ಈಗಾಗಲೇ ಸಲ್ಲಿಸಿವೆ.

ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿರುವ ಅಭ್ಯರ್ಥಿಗಳು, ಶಿಕ್ಷಣ ತಜ್ಞರು, ಮರು ಪರೀಕ್ಷೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಕುರಿತು ದೆಹಲಿ, ಪಟ್ನಾ, ಗುಜರಾತ್‌ನಲ್ಲಿ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಜುಲೈ 8ರಂದು ಅರ್ಜಿ ವಿಚಾರಣೆ ನಡೆಯಲಿರುವ ಬೆನ್ನಲ್ಲೇ, ಈ ಹಿಂದೆ ಜುಲೈ6ರಂದು ನಡೆಸಲು ನಿರ್ಧರಿಸಿದ್ದ ನೀಟ್‌– ಯುಜಿ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಅಧಿಕಾರಿಗಳು ತಿಂಗಳ ಕೊನೆಯವರೆಗೂ ಮುಂದೂಡಿದ್ದಾರೆ. ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಉದ್ದೇಶಿತ ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂಕೋರ್ಟ್‌ ಈ ಹಿಂದೆ ನಿರಾಕರಿಸಿತ್ತು. ನೀಟ್‌ನಲ್ಲಿ ಕೃಪಾಂಕ ಪಡೆದು ಉತ್ತಮ ರ‍್ಯಾಂಕ್‌ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್‌ 23ರಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕ್ರಮಕ್ಕೆ ಸುಪ್ರೀಂಕೋರ್ಟ್‌ ಜೂನ್‌ 13ರಂದು ಒಪ್ಪಿಗೆ ಸೂಚಿಸಿತ್ತು.

*ನೀಟ್‌ ಯುಜಿ ಪರೀಕ್ಷೆ ಅಕ್ರಮ; ಮರು ಪರೀಕ್ಷೆ ಕೋರಿ 3 ಡಜನ್‌ಗೂ ಅಧಿಕ ಸುಪ್ರೀಂಕೋರ್ಟ್‌ಗೆ ಅರ್ಜಿ

*ಇಂದಿನಿಂದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್‌

*ಮರುಪರೀಕ್ಷೆಗೆ ಕೇಂದ್ರ, ಎನ್‌ಟಿಎ ನಕಾರ

*ಜೂನ್‌ 23ರಿಂದ ಸಿಬಿಐ ತನಿಖೆ ಆರಂಭ

*ಕೃಪಾಂಕ ಬರೆದು ಉತ್ತಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.